'ಮಕ್ಕಳ ಸಂಖ್ಯೆ ಇಳಿಕೆಗೆ ಶಿಕ್ಷಣ ಇಲಾಖೆಯೂ ಕಾರಣ'
ಉಡುಪಿ: ಕನ್ನಡ ಮಾಧ್ಯಮ ಶಾಲೆಗಳು ಪೋಷಕರ ಇಚ್ಚೆಗೆ ತಕ್ಕಂತೆ ಪರಿವರ್ತನೆಯಾಗದಿರುವುದು ಮತ್ತು ಇಲಾಖೆಯ ಕಾರ್ಯವೈಖರಿಯೂ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿರಬಹುದು ಎಂದು ಉಡುಪಿ ಜಿಲ್ಲಾ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಬಂಟಕಲ್ಲು ಶ್ರೀದುರ್ಗಾಪರಮೆಶ್ವರಿ ಹಿ.ಪ್ರಾ. ಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪೋಷಕರ, ಶಿಕ್ಷಕರ ಮತ್ತು ಊರಿನ ನಾಗರಿಕರ ಸಾಂಘಿಕ ಸ್ಪಂದನದಿಂದ ಕನ್ನಡ ಮಾಧ್ಯಮ ಶಾಲೆಗಳು ಜಿಲ್ಲೆಯಲ್ಲಿ ಉತ್ತಮ ಸಾಧನೆ ಮಾಡಿವೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳು, ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಮಕ್ಕಳಿಗಿಂತ ಸಾಮಾನ್ಯ ಜ್ಞಾನ ಹಾಗೂ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಉಡುಪಿ ಜಿಪಂ ಅಧ್ಯಕ್ಷ ಬಿ. ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ್ ವಾಗ್ಲೆ, ಲೂವಿಸ್ ಮಾರ್ಟಿಸ್, ಮಾಧವ ಆಚಾರ್ಯ ಉಪಸ್ಥಿತರಿದ್ದರು.
ಶಾಲೆ ಹಳೆವಿದ್ಯಾರ್ಥಿ ಬಿ. ಪುಂಡಲೀಕ ಮರಾಠೆ ನಿರೂಪಿಸಿದರು. ಶಿಕ್ಷಕ ಚೋಮ ನಾಯ್ಕ್ ವಂದಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಪುನಾರು ಸುಬ್ರಹ್ಮಣ್ಯ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಪು ಬಳಗದವರಿಂದ ಪಿರ ಬನ್ನಗ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.