ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮತ್ತೆ ನೈತಿಕ ಪೊಲೀಸ್‌ಗಿರಿ: ನಾಲ್ವರು ಆರೋಪಿಗಳ ಸೆರೆ

Vishwanath S
Updated On : 26 Dec 2013, 11:34 am

ಪುತ್ತೂರು: ಭಿನ್ನ ಕೋಮಿನ ಮಹಿಳೆ ಜತೆ ಮಾತನಾಡಿದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ತೋರಿದ ನಾಲ್ವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
 ಬಂಟ್ವಾಳ ಜೋಗಿಬೆಟ್ಟು ಪೆರಾಜೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮೊಹಮ್ಮದ್ ಫೈಸಲ್ (27) ಹಾಗೂ ಸಲ್ಮಾನ್ ಫಾರಿಶ್ (20), ಮಾಣಿ ಬುಡೋಳಿ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ ಹಬೀಬ್ (25) ಮತ್ತು ಕೆದಿಲ ಗ್ರಾಮದ ಪೇರಮೊಗರು ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಆದಂ ಎಸ್. (38) ಬಂಧಿತರು. ಆರೋಪಿಗಳ ವಿರುದ್ಧ ಕೊಲೆ ಯತ್ನ, ದರೋಡೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
 ಜಯರಾಮ ಪೂಜಾರಿ ಎಂಬವರನ್ನು ಅರೆನಗ್ನಗೊಳಿಸಿ ಹಲ್ಲೆ ನಡೆಸಿ, ಮರ್ಮಾಂಗಕ್ಕೆ ತಿವಿದು, ಕೊಲೆಗೆ ಯತ್ನಿಸಿ, ಮೊಬೈಲ್ ಫೋನ್, ಸಿಮ್ ಮತ್ತು ರು. 4500 ದರೋಡೆ ಮಾಡಿರುವುದಾಗಿ ಆರೋಪಿಸಲಾಗಿತ್ತು. ಹಲ್ಲೆಯಿಂದ ಗಂಭೀರ ಗಾಯಗೊಂಡ ಜಯರಾಮ ಪೂಜಾರಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ವೃತ್ತಿಯಲ್ಲಿ ಚಾಲಕನಾಗಿರುವ ಜಯರಾಮ ಪೂಜಾರಿ ಕುಕ್ಕಾಜೆ ಪದವಿನಲ್ಲಿ ಕೆಂಪು ಕಲ್ಲಿನ ಕ್ವಾರಿಯಲ್ಲಿಯೂ ಕೆಲಸ ಮಾಡುತ್ತಿದ್ದರು. ಅಲ್ಲೇ ಸಮೀಪದ ಮತ್ತೊಂದು ಕ್ವಾರಿಯಲ್ಲಿ ಫೈಸಲ್ ಕೆಲಸ ಮಾಡುತ್ತಿದ್ದ. ಇವರಿಬ್ಬರ ಮಧ್ಯೆ ಕ್ವಾರಿ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಡಿ.21ರಂದು ಜಯರಾಮ ಪೂಜಾರಿ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿಗೆ ಕಲ್ಲಿನ ಹಣ ಸಂಗ್ರಹಿಸಲು ಬಂದಿದ್ದರು. ಈ ಸಂದರ್ಭ ಪರಿಚಯದ ಭಿನ್ನ ಕೋಮಿನ ಮಹಿಳೆಯೊಬ್ಬರು ಸಿಕ್ಕಿದ್ದು, ಅಲ್ಲೇ ಸಮೀಪವಿರುವ ಅವರ ಮನೆಗೆ ಜಯರಾಮ ಪೂಜಾರಿ ತೆರಳಿದ್ದರು. ಈ ವಿಚಾರ ಅರಿತ ಫೈಸಲ್, ತಂಡದೊಂದಿಗೆ ಅಲ್ಲಿಗೆ ಆಗಮಿಸಿ ಜಯರಾಮ ಪೂಜಾರಿ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿ ದರೋಡೆ ಮಾಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಉಳಿದ ಅರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement