ಗಂಡು ಮಗುವಿನಲ್ಲಿ ತಾಯಂದಿರು ಮಹಿಳಾ ಕಾಳಜಿ ಬೆಳೆಸಿ; ಸಾಜಿದುನ್ನೀಸಾ ಹುಬ್ಬಳ್ಳಿ
ಉಡುಪಿ: ತಾಯಿ ತನ್ನ ಗಂಡುಮಗುವಿನಲ್ಲಿ ಚಿಕ್ಕಂದಿನಲ್ಲಿಯೇ ಮಹಿಳೆಯರ ಬಗ್ಗೆ ಕಾಳಜಿ, ಗೌರವ ಭಾವನೆಗಳನ್ನು ಬೆಳೆಸಿದರೆ ಆತ ಮುಂದೆ ತನ್ನ ಜೀವನದ ಯಾವ ಹಂತದಲ್ಲೂ ಮಹಿಳೆಗೆ ಅಪಾಯಕಾರಿ ಆಗಲಾರ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ರಾಜ್ಯಸಂಚಾಲಕಿ ಸಾಜಿದುನ್ನೀಸಾ ಹುಬ್ಬಳ್ಳಿ ಅವರು ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ನ 'ಮಹಿಳೆ ಮಾನವತೆಯ ಶಿಲ್ಪಿ' ಎಂಬ ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಉಡುಪಿಯ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾದ ಮಹಿಳಾ ತಾಲೂಕು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ವಿಭಾಗದ ಸಂಚಾಲಕಿ ಸಾಜಿದಾ ಮೂಮಿನ್, 'ಅನುಪಮ' ಮಹಿಳಾ ಮಾಸಿಕ ಸಹಸಂಪಾದಕಿ ಕುಲ್ಸೂಮ್ ಅಬೂಬಕ್ಕರ್, ಹೂಡೆ ವಿಭಾಗದ ಸಂಚಾಲಕಿ ಜಮೀಲಾ ಹೂಡೆ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಉಡುಪಿ ಜಿಲ್ಲಾ ವಿಭಾಗದ ಸಂಚಾಲಕಿ ಸಮೀನಾ ಶುಕೂರ್ ಸ್ವಾಗತಿಸಿದರು. ಜಮೀಲಾ ಮಲ್ಪೆ ಠರಾವು ಮಂಡಿಸಿದರು. ಶಹನಾಝ್ ಕಾಪು ಹಾಗೂ ಶಿಫಾ ಮನ್ನಾ ನಿರೂಪಿಸಿದರು.