ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

2014ರಲ್ಲಿ ಕಾರ್ಕಳ ಗೊಮ್ಮಟನಿಗೆ ಮಹಾಮಜ್ಜನ ಭಾಗ್ಯವಿಲ್ಲ

Vishwanath S
Updated On : 28 Dec 2013, 11:29 am

ಉಡುಪಿ: ಸಂಪ್ರದಾಯದಂತೆ 2014ರ ಫೆಬ್ರವರಿ ತಿಂಗಳಲ್ಲಿ ನಡೆಯಬೇಕಾಗಿದ್ದ, ಉಡುಪಿ ಜಿಲ್ಲೆಯ ಕಾರ್ಕಳದ ಗೋಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿಲ್ಲ.
ಜೈನರ ಆರಾಧ್ಯ ಮೂರ್ತಿಯಾದ ಬಾಹುಬಲಿ ವಿಗ್ರಹಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ವೈಭವದಿಂದ ಮಹಾಮಸ್ತಕಾಭಿಷೇಕ ನಡೆಸುವುದು ಸಂಪ್ರದಾಯ. ಇದು ಜೈನರ ಪಾಲಿಗೆ ಅತ್ಯಂತ ಶ್ರೇಷ್ಠ ಮತ್ತು ಬಹಳ ದೊಡ್ಡ ಆಚರಣೆಯಾಗಿದೆ.
 ಇದರಲ್ಲಿ ದೇಶಾದ್ಯಂತದಿಂದ ಲಕ್ಷಾಂತರ ಮಂದಿ ಜೈನ ಮತಾನುಯಾಯಿಗಳು ಆಗಮಿಸಿ ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಾರೆ.
ಕಾರ್ಕಳದಲ್ಲಿರುವ ಬಾಹುಬಲಿ ವಿಗ್ರಹಕ್ಕೆ 2002ರ ಫೆಬ್ರವರಿ ತಿಂಗಳಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು. ಇದೀಗ 12 ವರ್ಷಗಳ ನಂತರ 2014ರ ಫೆಬ್ರವರಿ ತಿಂಗಳಲ್ಲಿ ಮಹಾಮಸ್ತಕಾಭಿಷೇಕ ನಡೆಯಬೇಕಾಗಿತ್ತು, ಆದರೆ ನಡೆಯುತ್ತಿಲ್ಲ, ಇದಕ್ಕೆ ಕಾರಣ ಜನವರಿ ತಿಂಗಳಲ್ಲಿ ನಡೆಯುವ ಉಡುಪಿಯ ಕೃಷ್ಣ ಮಠದ ಪರ್ಯಾಯೋತ್ಸವ ಮತ್ತು ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ.
ಇತ್ತೀಚೆಗೆ ಈ ಮಸ್ತಾಕಾಭಿಷೇಕದ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಜೈನ ಧರ್ಮ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಮತ್ತಿತರರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪರ್ಯಾಯೋತ್ಸವ ಮತ್ತು ಚುನಾವಣೆಯ ಕಾರಣಗಳಿಂದಾಗಿ ಮಹಾಮಸ್ತಾಭಿಷೇಕ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು 2015ರ ಫೆಬ್ರವರಿ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಯಿತು.
ಸಂಪ್ರದಾಯ ಉಲ್ಲಂಘನೆಯಾಗಲ್ಲ: 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯಬೇಕು ಎನ್ನುವ ಸಂಪ್ರದಾಯ ಇದ್ದರೂ, ಈ ಹಿಂದೆ 12 ವರ್ಷಗಳಿಗಿಂತ ಮೊದಲೇ ಮಹಾಮಸ್ತಕಾಭಿಷೇಕ ನಡೆಸಲಾದ, ನಾನಾ ಕಾರಣಗಳಿಂದ 30 ವರ್ಷಗಳಿಗೂ ಅಧಿಕ ಕಾಲ ಮಹಾಮಸ್ತಕಾಭಿಷೇಕ ನಡೆಯದೇ ಇದ್ದ ಉದಾಹರಣೆಗಳೂ ಇವೆ. ಆದ್ದರಿಂದ ಮಹಾಮಸ್ತಕಾಭಿಷೇಕವನ್ನು 1 ವರ್ಷ ಮುಂದೂಡುವುದು ಸಂಪ್ರದಾಯದ ಉಲ್ಲಂಘನೆಯಾಗುವುದಿಲ್ಲ ಎನ್ನುತ್ತಾರೆ ಜೈನಧರ್ಮ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿ ಗುಣಪಾಲ ಕಡಂಬ.
 ಒಟ್ಟಿನಲ್ಲಿ ಅತ್ಯಂತ ವೈಭವದಿಂದ ನಡೆಯಲಿರುವ ಕಾರ್ಕಳದ ಮಹಾಮಸ್ತಕಾಭಿಷೇಕವನ್ನು ವೀಕ್ಷಿಸಲು ಕಳೆದ 12 ವರ್ಷಗಳಿಂದ ಕಾಯುತ್ತಿದ್ದ ಬಾಹುಬಲಿಯ ಭಕ್ತಾಭಿಮಾನಿಗಳಿಗೆ ಕೊಂಚ ನಿರಾಸೆಯಾದರೂ, ಕೇವಲ ಇನ್ನೊಂದೇ ವರ್ಷ ಕಾಯಬೇಕಾಗುತ್ತದೆ ಅಷ್ಟೇ ಎಂಬ ಆಶಾಭಾವನೆ ಇದೆ.
12 ವರ್ಷಗಳಿಗೊಮ್ಮೆ
ಮಹಾಮಸ್ತಕಾಭಿಷೇಕ ನಡೆಯಬೇಕು ಎನ್ನುವ ಸಂಪ್ರದಾಯ ಇದ್ದರೂ, ಈ ಹಿಂದೆ 12 ವರ್ಷಗಳಿಗಿಂತ ಮೊದಲೇ ಮಹಾಮಸ್ತಕಾಭಿಷೇಕ ನಡೆಸಲಾದ, ನಾನಾ ಕಾರಣಗಳಿಂದ 30 ವರ್ಷಗಳಿಗೂ ಅಧಿಕ ಕಾಲ ಮಹಾಮಸ್ತಕಾಭಿಷೇಕ ನಡೆಯದೇ ಇದ್ದ ಉದಾಹರಣೆಗಳೂ ಇವೆ. ಆದ್ದರಿಂದ ಮಹಾಮಸ್ತಕಾಭಿಷೇಕವನ್ನು 1 ವರ್ಷ ಮುಂದೂಡುವುದು ಸಂಪ್ರದಾಯದ
ಉಲ್ಲಂಘನೆಯಾಗುವುದಿಲ್ಲ.
 ಗುಣಪಾಲ ಕಡಂಬ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿ.
ಕರಿಕಲ್ಲಿನ ಗೋಮ್ಮಟೇಶ್ವರನಿಗೆ ಪವಿತ್ರ ಜಳಕ...
ಗೊಮ್ಮಟೇಶ್ವರ ವಿಗ್ರಹಗಳಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ. ಸುಮಾರು 2 ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ವಿಗ್ರಹದ ತಲೆ ಮೇಲೆ ಭಾರೀ ಪ್ರಮಾಣದಲ್ಲಿ ಹಾಲು, ಸಕ್ಕರೆ, ಅರಿಶಿನ, ಗಂಧ, ಚಂದನ ಇತ್ಯಾದಿಗಳ ಅಭಿಷೇಕ ನಡೆಸಲಾಗುತ್ತದೆ.
ಇಲ್ಲಿನ ಪರಿಸರದಲ್ಲಿರುವ 'ಕರಿ ಬಣ್ಣದ ಕಲ್ಲು ಬಂಡೆ'ಗಳಿಂದಾಗಿ ಅಥವಾ ಇಲ್ಲಿರುವ 'ಕರಿಕೊಳ'(ಆನೆ ಕೊಳ)ದಿಂದಾಗಿ ಈ 'ಕಾರ್ಕಳ' ಎಂಬ ಹೆಸರು ಬಂದಿರಬೇಕು ಎನ್ನುತ್ತಾರೆ ಇತಿಹಾಸ ತಜ್ಞರು.   ಈ ಬಾಹುಬಲಿಯ ವಿಗ್ರಹವನ್ನು ಒಂದೇ ಕರಿಕಲ್ಲಿನಲ್ಲಿ ಕೆತ್ತಲಾಗಿದ್ದು, ಇದು 42 ಅಡಿ ಎತ್ತರವಿದೆ. ಕರ್ನಾಟಕದಲ್ಲಿರುವ 5 ಬಾಹುಬಲಿ ವಿಗ್ರಹಗಳಲ್ಲಿ 2ನೇ ಅತಿದೊಡ್ಡ ವಿಗ್ರಹ ಇದಾಗಿದೆ. ಇದನ್ನು 1432ರಲ್ಲಿ ಜೈನರ ಗುರುಗಳಾದ ಲಲಿತಕೀರ್ತಿ ಅವರ ಆಶಯದಂತೆ ಭೈರವ ಅರಸ ವಂಶದ ವೀರ ಪಾಂಡ್ಯ ದೇವ ಎಂಬ ರಾಜ ಕೆತ್ತಿಸಿದ ಎಂದು ದಾಖಲೆಗಳು ಹೇಳುತ್ತವೆ.
ಪರ್ಯಾಯೋತ್ಸವ, ಲೋಕಸಭಾ ಚುನಾವಣೆ...
ಉಡುಪಿಯಲ್ಲಿ ಜ. 18ರಂದು ಪರ್ಯಾಯೋತ್ಸವ. ನಂತರ ತಿಂಗಳಿಡೀ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ. ಇದೇ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಅಂಥದ್ದೇ ಇನ್ನೊಂದು ವೈಭವದ ಕಾರ್ಯಕ್ರಮ ಸಂಘಟನೆ ಕಷ್ಟ.
 ಪರ್ಯಾಯೋತ್ಸವ ಮತ್ತು ಲೋಕಸಭಾ ಚುನಾವಣೆಗಳ ನಡುವೆ ಮಹಾಮಸ್ತಕಾಭಿಷೇಕಕ್ಕೆ ಪೂರ್ವಭಾವಿ ಸಿದ್ಧತೆ, ಅಗತ್ಯ ಆರ್ಥಿಕ ಸಂಪನ್ಮೂಲವಗಳ ಕ್ರೋಢೀಕರಣ ಕಷ್ಟವಾಗುತ್ತದೆ.
ತಕ್ಷಣ ಲೋಕಸಭಾ ಚುನಾವಣೆಗಳು ಘೋಷಣೆಯಾದರೆ ರಾಜಕೀಯ ನಾಯಕರೆಲ್ಲಾ ಚುನಾವಣೆಯಲ್ಲಿ ವ್ಯಸ್ತರಾಗುತ್ತಾರೆ, ಅವರ್ಯಾರೂ ಮಹಾಮಸ್ತಕಾಭಿಷೇಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಕಷ್ಟವಾಗುತ್ತದೆ.
 ಮಹಾಮಸ್ತಕಾಭಿಷೇಕದ ನೆಪದಲ್ಲಿ ಕಾರ್ಕಳದಲ್ಲಿ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಯೋಜನೆ ತಯಾರಿಸಲಾಗಿದ್ದು, ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಅಡ್ಡಿಯಾಗುವುದರಿಂದ ಈ ಕಾಮಗಾರಿಗಳು ನಡೆಯುವುದಿಲ್ಲ.
 ಅದೇ ರೀತಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ.



-ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement