ಜ.5ರಂದು ಬಿಜೆಪಿ ಸಮಾಲೋಚನಾ ಸಭೆ
ಕಾರ್ಕಳ: ಮುಂದಿನ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ವಿಧಾನ ಸಭಾ ಬೂತ್ ಮಟ್ಟದ ಪ್ರಮುಖರ ಹಾಗೂ ಸಹಪ್ರಮುಖರ ಸಮಾಲೋಚನಾ ಸಭೆ ಜ.5ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಪುರಸಭೆ ಸರಿಯಾಗಿ ಬಳಸಿಕೊಂಡಿಲ್ಲ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆದರೂ ಪುರಸಭಾ ವ್ಯಾಪ್ತಿಯ ರಸ್ತೆಗಳ ದುರಸ್ತಿ ನಡೆಯುತ್ತಿಲ್ಲ. ರಾಜ್ಯ ಹೆದ್ದಾರಿ ರಸ್ತೆಯ ದುರವಸ್ಥೆ ವಿರುದ್ಧ ಹೆಜಮಾಡಿಯಿಂದ ಶಿರೂರು ತನಕ ಜ.2, 3 ಮತ್ತು 4ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಕಾರ್ಕಳದಿಂದ 500 ಕಾರ್ಯಕರ್ತರು ಭಾಗವಹಿಸಲಿರುವರು.
ಕಸ್ತೂರಿ ರಂಗನ್ ವರದಿ ಸ್ವೀಕರಿಸಿ ಗ್ರಾಮೀಣ ಕೃಷಿಯನ್ನು ಅವಲಂಬಿಸಿ ವಾಸ ಮಾಡಿಕೊಂಡಿರುವ ಮೂಲ ನಿವಾಸಿಗಳನ್ನು ಒಕ್ಕೆಬ್ಬಿಸಲು ಪ್ರಯತ್ನಿಸಿದರೆ ಅವರ ಬದುಕಿಗೆ ತೊಂದರೆಯನ್ನು ಒಡ್ಡಿದಂತಾಗುತ್ತದೆ. ಅದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಸಾಣೂರು ನರಸಿಂಹ ಕಾಮತ್, ಯುವಮೋರ್ಚಾದ ಅಧ್ಯಕ್ಷ ಮಹಾವೀರ ಹೆಗ್ಡೆ ಮತ್ತಿತರರು ಇದ್ದರು.
ನಿರ್ಭಯಾ ಮಹಿಳಾ ಜಾಗೃತಿ
ಕುಂದಾಪುರ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ವಲಯದ ವತಿಯಿಂದ ನಿರ್ಭಯಾ ಮಹಿಳಾ ಜಾಗೃತಿ ಕಾರ್ಯಕ್ರಮ ಬಸ್ರೂರು ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ಕುಂದಾಪುರ ಮಹಿಳಾ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಸುಜಾತ, ಕಾಲೇಜಿನ ಪ್ರಾಂಶುಪಾಲೆ ಚಂದ್ರಪ್ರಭಾ ಆರ್. ಹೆಗ್ಡೆ, ಸಿಎಫ್‌ಐ ರಾಜ್ಯಧ್ಯಕ್ಷ ಇಕ್ಬಾಲ್ ಇದ್ದರು.
ಸಾರಸ್ವತ ಕ್ರೆಡಿಕ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಪ್ರಥಮ ಶಾಖೆ ಆರಂಭ
ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ಪ್ರಾರಂಭಗೊಂಡ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ 7ನೇ ಹಾಗೂ ಉಡುಪಿ ತಾಲೂಕಿನ ಪ್ರಥಮ ಶಾಖೆ ಮೂಡುಬೆಳ್ಳೆ ಶ್ರೀಶಾಂತ ಸುಬ್ರಹ್ಮಣ್ಯ ಸಂಕೀರ್ಣದಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಶ್ರೀಕ್ಷೇತ್ರ ಅಡಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಧರ್ಮದರ್ಶಿ ಪುಂಡಲೀಕ ನಾಯಕ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ರೆ.ಫಾ. ಜೊಸ್ವಿ ಫೆರ್ನಾಂಡಿಸ್, ಬೆಳ್ಳೆ ಗ್ರಾಪಂ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಕಟ್ಟಡದ ಮಾಲೀಕ ಚೆನ್ನಕೇಶವ, ಉದ್ಯಮಿ ಸಕಾರಾಮ ಶೆಟ್ಟಿ, ನಾಗರಾಜ ಕಾಮತ್ ಇದ್ದರು.ಲಿಟ್ಲ್ ಅರ್ಚನಾ ವಸತಿ ಸಂಕೀರ್ಣ ಉದ್ಘಾಟನೆ
ಉಡುಪಿ: ನಗರದ ಬನ್ನಂಜೆ ಪ್ರವಾಸ ಮಂದಿರದ ಹಿಂಭಾಗದಲ್ಲಿ ಅರ್ಚನಾ ಪ್ರಾಜೆಕ್ಟ್ಸ್ ನಿರ್ಮಿಸಿರುವ ಲಿಟ್ಲ್ ಅರ್ಚನಾ ವಸತಿ ಸಂಕೀರ್ಣವನ್ನು ಶುಕ್ರವಾರ ಅಂಬಲಪಾಡಿ ಶ್ರೀಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹಾಗೂ ತ್ರಿಪುರ ಸುಂದರಿ ಬಲ್ಲಾಳ್ ಉದ್ಘಾಟಿಸಿ ಶುಭಹಾರೈಸಿದರು.
ಅರ್ಚನಾ ಪ್ರಾಜೆಕ್ಟ್ಸ್‌ನ ಪ್ರವರ್ತಕ ಡಾ. ಅಮ್ಮುಂಜೆ ಅರವಿಂದ ನಾಯಕ್ ಸ್ವಾಗತಿಸಿದರು. ಉದ್ಯಮಿ ವಿಶ್ವನಾಥ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅರ್ಚನಾ ಪ್ರಾಜೆಕ್ಟ್ಸ್ ಸಹ ಪ್ರವರ್ತಕ ಅಮಿತ್ ಅರವಿಂದ, ವಾಸ್ತು ಶಿಲ್ಪಿ ಹೃಷಿಕೇಶ್ ಶೆಣೈ, ಕಟ್ಟಡದ ಜೂನಿಯರ್ ಎಂಜಿನಿಯರ್ ರವಿರಾಜ್ ಉಪಸ್ಥಿತರಿದ್ದರು. ಕಾರ್ಕಳದ ಜಯರಾಮ ಆಚಾರ್ಯ ನಿರೂಪಿಸಿದರು.
ಬಿಪಿಎಲ್ ಕಾರ್ಡ್ ವಿತರಣೆ
ಪರ್ಕಳ: ಇಲ್ಲಿನ ಹೆರ್ಗ ಗ್ರಾಮದ ವಾರ್ಡ್‌ಗಳಾದ ಪರ್ಕಳ, ಶೆಟ್ಟಿಬೆಟ್ಟು, ಈಶ್ವರನಗರ ಮತ್ತು ಸರಳೇಬೆಟ್ಟು ವಾರ್ಡ್‌ಗಳ 2ನೇ ಹಂತದ ಸುಮಾರು 247 ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಶಾಸಕ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ವಿತರಿಸಿದರು.
ವಿಧವಾ ವೇತನ, ಸಂಧ್ಯಾ ಸುರಕ್ಷಾ ಮಾಸಾಶನ ಮತ್ತು ಅಡಕೆ ಕೊಳೆ ರೋಗ ಪರಿಹಾರದ ಚೆಕ್‌ಗಳನ್ನೂ ಇದೇ ವೇಳೆ ವಿತರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಸದಸ್ಯರಾದ ಚಂದ್ರಕಾಂತ ನಾಯ್ಕ, ಜ್ಯೋತಿ ನಾಯ್ಕ್, ತಹಸೀಲ್ದಾರ್ ಗುರುಪ್ರಸಾದ್, ಸ್ಥಳೀಯರಾದ ಗಣೇಶ್‌ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ರವಿರಾಜ್ ಶೆಟ್ಟಿ, ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ಸದಾಶಿವ ನಾಯ್ಕ್, ಉಮೇಶ್ ಶೆಟ್ಟಿ, ದಿನಕರ ಹೇರೂರು, ದಿನೇಶ, ಮಹೇಶ್, ಶ್ರೀನಿವಾಸ್ ನಾಯಕ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ನಗರಸಭೆ ಮಾಜಿ ಸದಸ್ಯ ರಾಮದಾಸ್ ನಾಯಕ್ ನಿರೂಪಿಸಿದರು.
ಜ.11, 12ರಂದು ಜಿಲ್ಲಾ ಮಟ್ಟದ ಕ್ರೀಡಾಕೂಟ
ಬ್ರಹ್ಮಾವರ: ಇಲ್ಲಿನ ಎಸ್‌ಎಂಎಸ್ ಕಾಲೇಜಿನ ಮೈದಾನದಲ್ಲಿ ಜ.11 ಮತ್ತು 12ರಂದು ಉಡುಪಿ ಜಿಲ್ಲಾ ಮಟ್ಟದ ಜ್ಯೂನಿಯರ್ ಕ್ರೀಡಾಕೂಟವನ್ನು ನಡೆಸಲಾಗುವುದು. ಕ್ರೀಡಾಕೂಟವು 14, 16, 18, 20ರ ವಯೋವಾನದಲ್ಲಿ ಮತ್ತು ಹಿರಿಯರ ವಿಭಾಗದಲ್ಲಿ ನಡಸಲಾಗುವುದು. ಆಸಕ್ತರು ಪ್ರವೇಶ ಪತ್ರವನ್ನು ಗ್ರೆಗರಿ ಡಿಸಿಲ್ವ, ದೈಹಿಕ ಶಿಕ್ಷಣ ಶಿಕ್ಷಕರು, ಎಸ್‌ಎಂಎಸ್ ಪಪೂ ಕಾಲೇಜು ಬ್ರಹ್ಮಾವರ ಇಲ್ಲಿಗೆ ಜ.8ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9448842909 ಅಥವಾ 9886118207ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್‌ಐಸಿ ವಿಭಾಗೀಯ ಕಚೇರಿ ಉದ್ಘಾಟನೆ
ಉಡುಪಿ: ಭಾರತ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ ಇದರ ಉಡುಪಿ ವಿಭಾಗೀಯ ಕಚೇರಿಯನ್ನು ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಬುಧವಾರ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಎ.ಕೆ. ರಾಮಕೃಷ್ಣ, ಹಿರಿಯ ಅಧಿಕಾರಿ ಬಿ.ಕೆ. ವಿಜಯಕುಮಾರ್ ಶೆಟ್ಟಿ, ಮಣಿಪಾಲ ಮೀಡೀಯಾ ನೆಟ್‌ವರ್ಕ್, ಆಭರಣ ಸಮೂಹ ಸಂಸ್ಥೆ ಹಾಗೂ ಹಿರೋ ಮತ್ತು ಹೊಂಡಾ ಕಂಪೆನಿಯ ಸದಸ್ಯರು, ಬ್ಯಾಂಕ್ ಆಫ್ ಬರೋಡಾ ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. ಪ್ರತಿಭಾ ಶೆಟ್ಟಿ ನಿರೂಪಿಸಿದರು. ನಾಗೇಂದ್ರ ಭಟ್ ವಂದಿಸಿದರು.
ರಂಗಕಲಾವಿದ ಮಾರ್ವಿನ್ ಅರಾನ್ನಾಗೆ ಸನ್ಮಾನ
ಉಡುಪಿ: ಶಿರ್ವದ ಸಂತ ಮೇರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ರಂಗಕಲಾವಿದ, ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಸ್ತ್ರಿಪಾತ್ರದಲ್ಲಿ ಮಿಂಚಿದ, ಶಾಲೆಯ ಹಳೆ ವಿದ್ಯಾರ್ಥಿ ಮಾರ್ವಿನ್ ಅರಾನ್ನಾ ಅವರನ್ನು ಇತ್ತೀಚಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಫಾ.ಡಾ. ಪ್ರಕಾಶ್ ಮೊತೇರೊ, ಕಾಲೇಜಿನ ಸಂಚಾಲಕ ರೆ.ಫಾ. ಸ್ಟ್ಯಾನಿ ತಾವ್ರೋ, ಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೈಮನ್ ಡಿಸೋಜ, ಕಾರ್ಯದರ್ಶಿ ಮತಾಯಸ್ ಲೋಬೊ, ಪ್ರೌಢಶಾಲೆ ವಿಭಾಗದ ಮುಖ್ಯಸ್ಥ ದೇವೇಂದ್ರ ನಾಯಕ್ ಇದ್ದರು.
ವಿದ್ಯಾರ್ಥಿಗಳ ಮೇಲೆ ಕ್ಲೋರೋಫಾರಂ; ಎಸ್‌ಎಫ್‌ಐ ಖಂಡನೆ
ಕುಂದಾಪುರ: ಕೋಟ ವಡ್ಡರ್ಸೆಯಲ್ಲಿ ಎನ್‌ಎಸ್‌ಎಸ್ ಶಿಬಿರದಲ್ಲಿದ್ದ ಬಾರ್ಕೂರು ಪದವಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಕ್ಲೋರೋಫಾರಂ ಎರಚಿ ದಾಳಿ ನಡೆಸಿರುವ ಕೃತ್ಯವನ್ನು ಭಾರತ ವಿದ್ಯಾರ್ಥಿ ಫೆಡರೇಶನ್‌ನ (ಎಸ್‌ಎಫ್‌ಐ) ಕುಂದಾಪುರ ತಾಲೂಕು ಸಮಿತಿ ಖಂಡಿಸಿದೆ. ಎನ್‌ಎಸ್‌ಎಸ್ ಕ್ಯಾಂಪ್‌ನಲ್ಲಿ ಸುಮಾರು 49 ವಿದ್ಯಾರ್ಥಿನಿಯರಿದ್ದರು. ಇದರಲ್ಲಿ ಸುಮಾರು 20 ವಿದ್ಯಾರ್ಥಿನಿಯರ ಮೇಲೆ ಕ್ಲೋರೋಫಾರಂ ಎರಚಿದ ಕಾರಣ ಅವರು ಪ್ರಜ್ಞಾಹೀನರಾಗಿದ್ದರು. ಇಂತಹ ಹಲವಾರು ದುಷ್ಕೃತ್ಯಗಳು ದಿನನಿತ್ಯವೆಂಬಂತೆ ನಡೆಯುತ್ತಿದೆ. ಇಂತಹ ದುಷ್ಕೃತ್ಯ ಎಸಗುವ ದುಷ್ಕರ್ಮಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೊಳಪಡಿಸಿ ಕಾನೂನು ಬಗ್ಗೆ ಗೌರವ ಮೂಡುವಂತೆ ಮಾಡಬೇಕು ಎಂದು ಎಸ್‌ಎಫ್‌ಐ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಎನ್‌ಎಸ್‌ಎಸ್ ಶಿಬಿರ
ಉಡುಪಿ: ಇಲ್ಲಿನ ಇನ್ನಂಜೆ ಎಸ್.ವಿ.ಎಚ್. ವಿದ್ಯಾಸಂಸ್ಥೆಯಲ್ಲಿ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಮತ್ತು ಉಡುಪಿಯ ಶ್ರೀಧರ್ಮಸ್ಥಳ ಆಯರ್ವೇದ ಮಹಾವಿದ್ಯಾಲಯದ ರಾ.ಸೇ. ಯೋಜನಾ ಘಟಕದ ಸಮುದಾಯ ವಿಕಾಸ ಎಂಬ 7 ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಇನ್ನಂಜೆ ಗ್ರಾಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಉಪಾನ್ಯಾಸಕರಾಗಿ ಬಳಕೆದಾರರ ವೇದಿಕೆಯ ಎ.ಪಿ. ಕೊಡಂಚ, ಪತ್ರಕರ್ತ ರಾಕೇಶ್ ಕುಂಜೂರು ಶುಭ ಹಾರೈಸಿದರು. ಶ್ರೀ.ಧ.ಮ.ಆ.ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಹೊಳ್ಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇನ್ನಂಜೆ ಯುವಕ ಮಂಡಳದ ಅಧ್ಯಕ್ಷ ಉಮೇಶ್ ಆಚಾರ್ಯ ವೇದಿಕೆಯಲ್ಲಿದ್ದರು. ಯೋಜನಾಧಿಕಾರಿ ಡಾ. ಶ್ರೀಕಾಂತ್ ಪಿ. ಸ್ವಾಗತಿಸಿದರು. ಶಿಬಿರಾರ್ಥಿ ರಜನಿ ವಂದಿಸಿದರು. ಮಾನಸ ನಿರೂಪಿಸಿದರು.