ತುಳುನಾಡ್ದ ಜಾತ್ರೆ; ಇಂದಿನಿಂದ 'ಬಡಕ್ಕಯಿ ತೇರ್' ಸಂಚಾರ
ಉಡುಪಿ: ದ.ಕ. ಜಿಲ್ಲೆಯ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ 25ನೇ ವರ್ಷಾಚರಣೆ 'ವಿಜಯ ರಜತ ಸಂಭ್ರಮ' ಅಂಗವಾಗಿ ಫೆ.5ರಂದು ನಡೆಯುವ 'ತುಳುನಾಡ್ದ ಜಾತ್ರೆ' ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಡುಪಿ ಜಿಲ್ಲೆಯಲ್ಲಿ ಡಿ. 31ರಿಂದ ಫೆ. 5ರವರೆಗೆ 'ಬಡಕ್ಕಯಿ ತೇರ್' (ಉತ್ತರದ ತೇರು) ಕಾರ್ಯಕ್ರಮ ನಡೆಯಲಿದೆ ಎಂದು ಈ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ 9 ಗಂಟೆಗೆ ಬಾರ್ಕೂರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳದ ಡಿ. ಹರ್ಷೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಬಾರ್ಕೂರು ಶಾಂತಾರಾಮ ಶೆಟ್ಟಿ ವಹಿಸಲಿದ್ದಾರೆ. ಹಳೆಯಂಗಡಿ ಅರಮನೆಯ ದುಗ್ಗಣ್ಣ ಸಾವಂತ ಭಾಗವಹಿಸಲಿದ್ದಾರೆ.
ತೇರು 31ರಂದು ಬಾರ್ಕೂರಿಗೆ ಹೊರಟು ಸಂಜೆ ಮಲ್ಪೆಗೆ, 1ರಂದು ಸಂಜೆ ಉಡುಪಿಗೆ, 2ರಂದು ಸಂಜೆ ಪಡುಬಿದ್ರಿಗೆ, 3ರಂದು ಸಂಜೆ ಬೆಳುವಾಯಿಗೆ, 4ರಂದು ಸಂಜೆ ಬಪ್ಪನಾಡಿಗೆ ಮತ್ತು 5ರಂದು ಸಂಜೆ ಮಂಗಳೂರಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.
ಸಮಿತಿ ಕಾರ್ಯದರ್ಶಿ ಸುಪ್ರಸಾದ್ ಶೆಟ್ಟಿ ಬೈಕಾಡಿ, ಪದಾಧಿಕಾರಿಗಳಾದ ಸುರೇಶ್ ರೈ, ವೇಣುಗೋಪಾಲ ಮಾರ್ಲ, ದಿನಕರ ಶೆಟ್ಟಿ ಕುರ್ಕಾಲು ಇದ್ದರು.