ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಔಷಧವಿಲ್ಲ...!

Vishwanath S
Updated On : 1 Jan 2014, 1:18 am

ಮಣಿಪಾಲ: ಜಿಲ್ಲೆಯಲ್ಲಿ ದಿನವೊಂದಕ್ಕೆ 2- 3 ಹಾವು ಕಡಿತದ ಪ್ರಕರಣಗಳು ನಡೆಯುತ್ತಿದ್ದು, ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಸೇರಿದಂತೆ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಔಷಧ ಲಭ್ಯವಿಲ್ಲ.
ಇತ್ತೀಚೆಗೆ ತೆಕ್ಕಟ್ಟೆ ಗ್ರಾಮದ ಶಾಲಾ ವಿದ್ಯಾರ್ಥಿಯೊಬ್ಬ ವಿಷದ ಹಾವು ಕಡಿದು ಸಕಾಲದಲ್ಲಿ ಔಷಧ ಲಭ್ಯವಾಗದೇ ಮೃತಪಟ್ಟ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಶ್ರೀಯಾನ್ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ತೆಕ್ಕಟ್ಟೆಯ ವಿದ್ಯಾರ್ಥಿಯನ್ನು ಮೊದಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಮಗುವಿನ ಹೆತ್ತವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಔಷಧ ಇಲ್ಲದಿದ್ದುದರಿಂದ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು, ಅದಾಗಲೇ ತಡವಾಗಿತ್ತು. ಕೊನೆಗೆ ಹೆತ್ತವರು ಮಣಿಪಾಲದ ಕೆಎಂಸಿಗೆ ದಾಖಲಿಸಿದರು, ಅಲ್ಲಿಯೂ ಔಷಧ ಲಭ್ಯ ಇರಲಿಲ್ಲ, ಮತ್ತೆ ಸರ್ಕಾರಿ ಆಸ್ಪತ್ರೆಗಳಿಂದ ಸಂಗ್ರಹಿಸಿ ಔಷಧ ನೀಡಲಾಯಿತಾದರೂ ಮಗು ಮೃತಪಟ್ಟಿದೆ ಎಂದು ವಿವರ ನೀಡಿದರು.
ಬೇಡಿಕೆ ಇದ್ದರೂ ಔಷಧ ಲಭ್ಯವಿಲ್ಲ:  ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 225 ಯೂನಿಟ್ ಔಷಧ ಸಂಗ್ರಹ ಇದೆ. ಇನ್ನೂ 225 ಯೂನಿಟ್ ಔಷಧಕ್ಕೆ ಅರೋಗ್ಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಈ ಔಷಧ ಲಭ್ಯ ಇಲ್ಲ ಎನ್ನುವ ಆತಂಕದ ವಿಷಯವನ್ನು ಆರೋಗ್ಯಾಧಿಕಾರಿ ಬಹಿರಂಗಪಡಿಸಿದರು.
ಅಲ್ಲದೆ, ಇದಕ್ಕೆ ಔಷಧ ತಯಾರಕರು ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಔಷಧದ ಬೆಲೆ ಸಮರವೇ ಕಾರಣ ಎಂದೂ ಹೇಳಿದರು.
ಹಾವು ಕಚ್ಚಿದರೆ ಸರ್ಕಾರಿ ಆಸ್ಪತ್ರೆಗೆ ತೆರಳಿ: ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಿಯೇ ಆಗಲಿ ಹಾವು ಕಡಿತದ ಪ್ರಕರಣಗಳು ಸಂಭವಿಸಿದಾಗ ತಕ್ಷಣ ತಾಲೂಕು-ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಿಗೆ ಧಾವಿಸುವಂತೆ ಜಿಲ್ಲೆಯ ಜನತೆಗೆ ಜಿ.ಪಂ. ಸಭೆಯ ಮೂಲಕ ಸೂಚನೆ ನೀಡಿದರು.
ಉಪಾಧ್ಯಕ್ಷೆ ಮಮತಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಅರುಣ್ ಕುಮಾರ್, ಗಣಪತಿ ಶ್ರೀಯಾನ್, ಸಿಇಓ ಪ್ರಭಾಕರ ಶರ್ಮ, ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಲೆಕ್ಕಾಧಿಕಾರಿ ತಿಮ್ಮಪ್ಪ ಇದ್ದರು.
  ಅಮಾನತಿಗೆ ಶಾಸಕರ ಸೂಚನೆ
ಜಿಲ್ಲೆಯ ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಅಂಗನವಾಡಿಗಳು ಸರ್ಕಾರದ ಆದೇಶದಂತೆ ಮಧ್ಯಾಹ್ನ 4 ಗಂಟೆವರೆಗೆ ಕಾರ್ಯ ನಡೆಸುತ್ತಿವೆ. ಆದರೆ, ಉಡುಪಿ ತಾಲೂಕಿನಲ್ಲಿ ಮಾತ್ರ 1.30ರ ವರೆಗೆ ನಡೆಯುತ್ತಿವೆ ಎಂಬ ಬಗ್ಗೆ ಜಿ.ಪಂ. ಸಭೆಯಲ್ಲಿ ಚರ್ಚೆ ನಡೆದು, ಸರ್ಕಾರ ಆದೇಶವನ್ನು ಉಲ್ಲಂಘಿಸುತ್ತಿರುವ ಉಡುಪಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರನ್ನು ಅಮಾನತುಗೊಳಿಸುವಂತೆ ಬೈಂದೂರು ಶಾಸಕ ಗೋಪಾಲ ಪೂಜಾರಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಅಡಕೆ ನಿಷೇಧ ಬೇಡವೇ ಬೇಡ
ಕೇಂದ್ರ ಸರ್ಕಾರದ ಪ್ರಸ್ತಾವಿತ ಅಡಕೆ ನಿಷೇಧದ ವಿರುದ್ಧ ರಾಜ್ಯ ಸರ್ಕಾರವನ್ನು ಆಗ್ರಹಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜಿ.ಪಂ. ಸದಸ್ಯ ಕಟಪಾಡಿ ಶಂಕರ ಪೂಜಾರಿ ವಿಷಯ ಪ್ರಸ್ತಾಪಿಸಿದರು. ಅವರಿಗೆ ಜಿ.ಪಂ. ಅಧ್ಯಕ್ಷರು ಬೆಂಬಲಿಸಿದರು. ಆದರೆ, ಕಾಂಗ್ರೆಸ್ ಸದಸ್ಯರಾದ ಮಂಜುನಾಥ ಪೂಜಾರಿ, ಅನಂತ ಮೊವಾಡಿ ಮತ್ತು ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು ಬಿಜೆಪಿ ಸದಸ್ಯರು ಈ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ ಎಂದು ಅಪಸ್ವರ ಎತ್ತಿದರು. ಆದರೂ, ಕೊನೆಗೆ ನಿರ್ಣಯ ಕೈಗೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement