ಪರಮೇಶ್ವರ, ಸಿದ್ದು ಭಿನ್ನ ಹೇಳಿಕೆ
ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳಾಗಬಯಸುವವರು ಅರ್ಜಿ ಸಲ್ಲಿಸಲು ನೀಡಲಾಗಿದ್ದ ಗಡುವು (ಜ.30) ಈಗಾಗಲೇ ಮುಗಿದಿದ್ದು ಇನ್ನು ಯಾರ ಅರ್ಜಿಯನ್ನೂ ಸ್ವೀಕರಿಸಲಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಕಟ್ಟುನಿಟ್ಟಾಗಿ ಹೇಳಿರುವ ಬೆನ್ನಲ್ಲೇ ಕಾಂಗ್ರೆಸ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ಅವರಿಬ್ಬರೂ ಶುಕ್ರವಾರ ಉಡುಪಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಪರಸ್ಪರ ಭಿನ್ನವಾದ ಹೇಳಿಕೆಗಳನ್ನು ನೀಡಿದ್ದಾರೆ.
ಕೊನೇ ದಿನದೊಳಗೆ ಖುದ್ದು ಸಿದ್ದರಾಮಯ್ಯ ಅವರೇ ಅರ್ಜಿ ಸಲ್ಲಿಸಿಲ್ಲ. ಈ ಬಗ್ಗೆ ಕೇಳಿದಾಗ ಅದೇನೂ ದೊಡ್ಡ ಇಶ್ಯು ಅಲ್ಲಾರಿ.. ಎಂದು ಹಾರಿಕೆಯ ಉತ್ತರ ನೀಡಿದರು.
ಡಾ. ಪರಮೇಶ್ವರ್ ಹೇಳಿರುವುದನ್ನು ಅವರ ಗಮನಕ್ಕೆ ತಂದಾಗ, ಅದು ಹೇಗಾಗುತ್ತೇರಿ ನಾನು ಇಲ್ಲಿ ಪಾದಯಾತ್ರೆ ಮಾಡುತ್ತಿದ್ದೇನೆ, ಅದನ್ನು ಬಿಟ್ಟು ಮಧ್ಯದಲ್ಲಿ ಹೋಗಿ ಅರ್ಜಿ ಕೊಡಕ್ಕಾಗುತ್ತಾ? ಈ ದೇಶದಲ್ಲಿ ಕೊನೆಯ ದಿನದೊಳಗೆ ಅರ್ಜಿ ಸಲ್ಲಿಸಿಲ್ಲ ಅನ್ನೋದೇನೂ ದೊಡ್ಡ ಪ್ರಮಾದ ಅಲ್ಲ. ಇಲ್ಲಿಂದ ಹೋದ ತಕ್ಷಣ ಅರ್ಜಿ ಕೊಡ್ತಿನಿ ಬಿಡಿ... ಎಂದು ಮುಂದೆ ನಡೆದರು.