ಪ್ರೇಮಿ, ಆತನ ಗೆಳೆಯ ಆತ್ಮಹತ್ಯೆ
ಉಡುಪಿ: ರಾಮನಗರ ಜಿಲ್ಲೆಯಿಂದ ಆಗಮಿಸಿದ್ದ ಮೂರು ಮಂದಿ ವಿದ್ಯಾರ್ಥಿಗಳಲ್ಲಿ ಇಬ್ಬರು ಮಲ್ಪೆಯ ತೊಟ್ಟಂ ಬೀಚ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಜೊತೆಗೆ ವಿಷ ಸೇವಿಸಿದ್ದ ಇನ್ನೊಬ್ಬ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾಳೆ.
ಮೃತರು ಮಧು (18) ಮತ್ತು ಹೇಮಂತ್ (20), ಬದುಕುಳಿದವರು ರೇಣುಕಾ ಯಾನೆ ಸೌಮ್ಯ (18). ಇವರೆಲ್ಲರೂ ರಾಮನಗರ ಜಿಲ್ಲೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು. ಇವರಲ್ಲಿ ಸೌಮ್ಯ ಮತ್ತು ಹೇಮಂತ ಪ್ರೇಮಿಗಳಾಗಿದ್ದು, ಮಧು ಇವರಿಬ್ಬರ ಆತ್ಮೀಯ ಸ್ನೇಹಿತನಾಗಿದ್ದ.
10 ದಿನ ಹಿಂದೆ ಮನೆ ಬಿಟ್ಟಿದ್ದರು: ಜ. 22ರಂದು ಈ ಮೂರೂ ಮಂದಿ ಮನೆ ಬಿಟ್ಟಿದ್ದಾರೆ. ಈ ಬಗ್ಗೆ ಸೌಮ್ಯ ತಂದೆ ಲಕ್ಷಣ ಕುಮಾರ್ ಅವರು ರಾಮನಗರ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ. ನಂತರ 10 ದಿನಗಳಲ್ಲಿ ಅವರು ಎಲ್ಲಿಗೆಲ್ಲಾ ಹೋಗಿದ್ದರು ಎಂಬುದು ತನಿಖೆಯಿಂದ ಇನ್ನಷ್ಟೇ ಬೆಳಕಿಗೆ ಬರಬೇಕಾಗಿದೆ.
ಶನಿವಾರ ಮೂರು ಮಂದಿ ಮಲ್ಪೆಗೆ ಬಂದಿದ್ದು, ವಸತಿ ಗೃಹವೊಂದರಲ್ಲಿ ರೂಮುಗಳನ್ನು ಪಡೆದಿದ್ದರು. ಸಂಜೆ 3 ಬಿರಿಯಾನಿ ಪಾರ್ಸೆಲುಗಳನ್ನು ಕಟ್ಟಿಸಿಕೊಂಡು ಮಲ್ಪೆ ಸಮುದ್ರ ತೀರದಲ್ಲಿ ನಡೆದುಕೊಂಡು ಸುಮಾರು 2-3 ಕಿ.ಮೀ. ದೂರದಲ್ಲಿರುವ ತೊಟ್ಟಂ ಬೀಚ್ನಲ್ಲಿರುವ ಬಾಳಿಗ ಗೆಸ್ಟ್ ಹೌಸ್ ಬಳಿಗೆ ಹೋಗಿ, ಬಿರಿಯಾನಿಗೆ ವಿಷ ಬೆರೆಸಿ ಮೂವರೂ ಜೊತೆಯಲ್ಲಿಯೇ ಊಟ ಮಾಡಿದ್ದಾರೆ ಮತ್ತು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಸ್ಥಳೀಯರು ಅಲ್ಲಿಗೆ ಬಂದಾಗ ಈ ಮೂರು ಮಂದಿ ಮರಳಲ್ಲಿ ಬಿದ್ದುಕೊಂಡಿರುವುದು ನೋಡಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮಧು ಮೃತಪಟ್ಟಿರುವುದು ಪತ್ತೆಯಾಯಿತು. ಉಳಿದಿಬ್ಬರು ಉಸಿರಾಡುತ್ತಿದ್ದು, ತಕ್ಷಣ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಸೌಮ್ಯ ವಾಂತಿ ಮಾಡಿಕೊಂಡಿದ್ದರಿಂದ ಬದುಕುಳಿದಿದ್ದು, ಹೇಮಂತ್ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಪ್ರೀತಿಗೆ ಸಿಕ್ಕದ ಒಪ್ಪಿಗೆ: ಸೌಮ್ಯ ಮತ್ತು ಹೇಮಂತ್ ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಇದರಿಂದ ಅವರಿಬ್ಬರೂ ಮನೆಯಿಂದ ಓಡಿ ಹೋಗುವ ನಿರ್ಣಯ ಕೈಗೊಂಡಿದ್ದರು. ಆದರೆ, ಮಧು ಯಾಕೆ ಅವರೊಂದಿಗೆ ಹೋಗಿದ್ದ ಎನ್ನುವುದು ನಿಗೂಢವಾಗಿದೆ. ಆತ ಬಡ ಕುಟುಂಬದವನಾಗಿದ್ದು, ಇದರಿಂದ ನೊಂದು ಮನೆ ಬಿಡುವ ನಿರ್ಧಾರ ಮಾಡಿದ್ದ. ತನ್ನ ಗೆಳೆಯ ಗೆಳತಿ ಮನೆ ಬಿಟ್ಟು ಓಡಿ ಹೋಗುವ ನಿರ್ಧಾರ ಮಾಡಿದ್ದನ್ನು ತಿಳಿದು ತಾನೂ ಅವರ ಜೊತೆಗೆ ಬಂದಿದ್ದ ಎಂದು ಬದುಕುಳಿದಿರುವ ಸೌಮ್ಯ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಮೂವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿಯೇ ಮನೆ ಬಿಟ್ಟಂತೆ ತೋರುತ್ತಿದ್ದರೂ, 10 ದಿನಗಳ ಕಾಲ ಏನು ಮಾಡಿದರು, ಎಲ್ಲಿಗೆ ಹೋಗಿದ್ದರು ಎನ್ನುವುದು ಬಹಿರಂಗವಾಗಿಲ್ಲ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ಮಂದಿಯ ಮನೆಗೆ ಮಾಹಿತಿ ನೀಡಲಾಗಿದ್ದು, ಅವರು ಸೋಮವಾರ ಬೆಳಗ್ಗೆ ಉಡುಪಿಗೆ ಬರಲಿದ್ದಾರೆ.