ಬೀಜಾಡಿ: ಗಣರಾಜ್ಯೋತ್ಸವ
ಕುಂದಾಪುರ: ಬೀಜಾಡಿ ಮೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 64ನೇ ಗಣರಾಜ್ಯೋತ್ಸವದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವಾದಿರಾಜ ಹೆಬ್ಬಾರ್ ಧ್ವಜಾರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಚಿಂತನ ಚಿತ್ರಕಲಾ ಅಂತಾರಾಷ್ಟ್ರೀಯ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಬಹುಮಾನಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಸಂದೇಶ ನೀಡಿದರು. ಗ್ರಾ.ಪಂ. ಸದಸ್ಯ ಅಶೋಕ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶ್ರೀನಿವಾಸ ಬಿಳಿಯ, ಎಸ್‌ಡಿಎಂಸಿ ಸದಸ್ಯೆ ರತ್ನಾವತಿ ಇದ್ದರು. ಮುಖ್ಯೋಪಾಧ್ಯಾಯ ಪದ್ಮನಾಭ ಅಡಿಗ ಸ್ವಾಗತಿಸಿದರು. ಶಿಕ್ಷಕ ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ನಳಿನಿ ವಂದಿಸಿದರು.
ಇಂದು ದಸಂಸ, ಕೊರಗ ಸಂಘಟನೆಗಳಿಂದ ಪ್ರತಿಭಟನೆ
ಕುಂದಾಪುರ: ದಲಿತ ಸಂಘರ್ಷ ಸಮಿತಿ ಮತ್ತು ಕೊರಗ ಶ್ರೇಯೋಭಿವೃದ್ಧಿ ಸಂಘಟನೆ ವತಿಯಿಂದ ಬುಧವಾರ ಬೆಳಗ್ಗೆ 10 ಗಂಟೆಗೆ ಕುಂದಾಪುರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪರಿಶಿಷ್ಟ ಪಂಗಡದ ಮಹಿಳೆ ಮೀಸಲಿರಿಸಲಾಗಿದ್ದ ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ವಂಚಿಸಿ ಅಧಿಕಾರಷಾಹಿ ಧೋರಣೆಯನ್ನು ಪ್ರದರ್ಶಿಸಿದ ವಂಡ್ಸೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಡಕೆಕೊಡ್ಲು ಉದಯ ಕುಮಾರ್ ಶೆಟ್ಟಿಯ ದುರ್ವತನೆ ಹಾಗೂ ಪಂಚಾಯಿತಿಗೆ ನಿಗಧಿಪಡಿಸಲಾಗಿದ್ದ ಮೀಸಲಾತಿ ವ್ಯವಸ್ಥೆಯನ್ನು ಉಲ್ಲಂಘಿಸಿ ಸರ್ವಾಧಿಕಾರ ಧೋರಣೆ ವಿರೋಧಿಸಿ ಹಾಗೂ ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿಯ ಮೇಲೆ ನಡೆಸಿದ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಯಲಿದೆ ಎಂದು ಕುಂದಾಪುರ ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘಟನೆಯ ಅಧ್ಯಕ್ಷ ಗಣೇಶ್ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ದ ಅಧ್ಯಕ್ಷ ಉಮೇಶ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.