ಜಾಗ ವ್ಯವಹಾರ ಅಸಮಾಧಾನ: ಹಲ್ಲೆ
ವಿಟ್ಲ: ಜಾಗದ ವ್ಯಾಪಾರದಲ್ಲಿ ಬಂದ ಲಾಭಾಂಶದ ವಿಚಾರವಾಗಿ ವ್ಯಕ್ತಿಗಳಿಬ್ಬರ ನಡುವೆ ಹಲ್ಲೆ ನಡೆದ ಘಟನೆ ಬೊಬ್ಬೆಕೇರಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಪೊನ್ನತ್ತಾಡಿ ನಿವಾಸಿ ತುಕ್ರಪ್ಪ ಗೌಡರ ಪುತ್ರ ಹೊನ್ನಪ್ಪ ಗೌಡ (35) ವಿಟ್ಲ ಕಸಬಾ ಗ್ರಾಮದ ನೆಲಿಗುಡ್ಡೆ ನಿವಾಸಿ ಅಬ್ದುಲ್ ರಜಾಕ್ (35) ಸೇರಿಕೊಂಡು ಜಾಗದ ವ್ಯಾಪಾರಗಳನ್ನು ನಡೆಸುತ್ತಿದ್ದು, ಮಾರಾಟವಾದ ಜಾಗದ ಕಮಿಷನ್ ಬಗ್ಗೆ ಮಾತುಕತೆಗಳು ವಿಕೋಪಕ್ಕೆ ತೆರಳಿ ರಜಾಕ್ ಅವರನ್ನು ಬೊಬ್ಬೆಕೇರಿಯಲ್ಲಿ ತಡೆದ ಹೊನ್ನಪ್ಪ ಕೈಯಿಂದ ಥಳಿಸಿದ್ದಾನೆ. ಮುಖಕ್ಕೆ ತರಚು ಗಾಯಗಳಾದ ರಜಾಕ್ ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.