ರಾಜ್ಯ ಬಜೆಟ್ 2013: ಜನ ಏನಂತಾರೆ?
ಕಾಸರಗೋಡು- ಮಂಗಳೂರು - ಉಡುಪಿ ನಡುವೆ ಹೈಸ್ಪೀಡ್ ರೈಲಿನ ಘೋಷಣೆ ಕೂಡ ಸ್ವಾಗತಾರ್ಹ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಬೇಡಿಕೆ ಈಡೇರಿದ್ದು, ಖುಷಿಯ ವಿಷಯ.
- ಎಸ್.ಎಸ್. ತೋನ್ಸೆ, ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ
ಕಳೆದ ಬಜೆಟ್ನಲ್ಲಿ ಕೊಟ್ಟ ಭರವಸೆಗಳೇ ಈಡೇರಿಲ್ಲ. ಹೊಸ ಭರವಸೆಗಳನ್ನು ಈಡೇರಿಸುವುದು ಯಾವಾಗ ಇನ್ನೂ ಎಲ್ಲಾ ಮನೆಗಳಿಗೆ ವಿದ್ಯುತ್ ನೀಡಲಾಗದ ಸರ್ಕಾರ ಎಲ್ಲಾ ಹಳ್ಳಿಗಳಿಗೆ ಸೈಬರ್ ಕೆಫೆ ಭರವಸೆ ಬೇಕಿತ್ತೆ...?
- ಯು. ಶಬ್ಬೀರ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ
ಚಮಕ್ ಭರವಸೆಗಳ ಗಿಮಿಕ್ನಿಂದ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ ಮಾಡಿರುವ ದುರಾಡಳಿತವನ್ನು ಮುಚ್ಚಿ ಹಾಕುವುದಕ್ಕೆ ಪ್ರಯತ್ನಿಸಲಾಗಿದೆ. ತಾಲೂಕು ಘೋಷಣೆ ಕೂಡ ಚುನಾವಣೆಗೆ ಸೀಮಿತವೇ...?
- ದೇವಿಪ್ರಸಾದ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ
ಬ್ರಹ್ಮಾವರ ಮತ್ತು ಬೈಂದೂರು ತಾಲೂಕುಗಳ ರಚನೆ ಅಲ್ಲಿಯ ಜನರಿಗೆ ರಾಜ್ಯ ಬಿಜೆಪಿ ಸರ್ಕಾರ ನೀಡಿರುವ ಬಹುದೊಡ್ಡ ಕೊಡುಗೆ. ಆಡಳಿತಾತ್ಮಕವಾಗಿ ಅಲ್ಲಿನ ಜನರು ಬಹುತೇಕ ಸಮಸ್ಯೆಗಳು ಇದರಿಂದ ಪರಿಹಾರವಾಗುತ್ತವೆ.
- ಕೆ. ರಘುಪತಿ ಭಟ್, ಶಾಸಕ, ಉಡುಪಿ
ಓಟ್ಬ್ಯಾಂಕ್ ದೋಚುವ ಪ್ರಯತ್ನದ ಬಜೆಟ್ ಅಂತ ಜನರಿಗೆ ಅರ್ಥ ಅಗುತ್ತದೆ. ಹಿಂದಿನ ಬಜೆಟ್ನ ವಿಮರ್ಶೆ ಮಾಡದೆ ಹೊಸ ಬಜೆಟ್, ಹೊಸ ಬಜೆಟ್ ಮಂಡಿಸಲಾಗಿದೆ. ಇದು ಒಳ್ಳೆಯ ಪರಿಪಾಠ ಅಲ್ಲ.
- ಸುರೇಂದ್ರನಾಥ ಶೆಟ್ಟಿ, ರಾಜಕೀಯ ಶಾಸ್ತ್ರ ಉಪನ್ಯಾಸಕರು, ಎಂಜಿಎಂ ಕಾಲೇಜು
65 ವರ್ಷಗಳಿಂದ ರು. 50,000 ಸಾವಿರ ಕೋಟಿ ಸಾಲ ರಾಜ್ಯದ ಮೇಲೆ ಇದ್ದರೇ, ಕೇವಲ ಮೂರೂವರೆ ವರ್ಷದ ಬಿಜೆಪಿ ಸರ್ಕಾರದ ಸಾಲದ ಹೊರೆ 126 ಸಾವಿರ ಕೋಟಿ ಮೀರಿದೆ. ಕರಾವಳಿಗೆ ಯಾವುದೇ ಆದ್ಯತೆ ಇಲ್ಲ.
- ಗೋಪಾಲ ಭಂಡಾರಿ, ಶಾಸಕ, ಕಾರ್ಕಳ
ಸುಮಾರು 22 ವರ್ಷಗಳ ಜನರ ಹೋರಾಟಕ್ಕೆ ಸರಕಾರ ಸೂಕ್ತವಾಗಿ ಸ್ಪಂದಿಸಿದೆ. ಬೈಂದೂರು ತಾಲೂಕು ರಚನೆ ಘೋಷಿಸಿ, 2 ಕೋಟಿ ಅನುದಾನವನ್ನು ಬಜೆಟ್ನಲ್ಲಿ ಮೀಸಲಿಟ್ಟಿರುವುದು ಸ್ವಾಗತಾರ್ಹ.
- ಕೆ. ಲಕ್ಷ್ಮೀನಾರಾಯಣ,
ಶಾಸಕರು, ಬೈಂದೂರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಕ್ರಮಗಳನ್ನು ಪ್ರಕಟಿಸಲಾಗಿದೆಯೇ ಹೊರತು ನಿಗದಿ ಪಡಿಸಿದ ಮೊತ್ತ ಹೇಳಿಲ್ಲ. ಅಲ್ಲದೆ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರನ್ನು ನೇಮಿಸುವ ಪ್ರಸ್ತಾವ ಬಜೆಟ್ನಲ್ಲೇ ಇರುವುದು ಸಂದಿಗ್ಧತೆಯನ್ನು ಹೆಚ್ಚಿಸಿದೆ.
- ಡಾ. ಚಂದ್ರಶೇಖರ ದಾಮ್ಲೆ, ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಸುಳ್ಯಮಾಜಿ ಶಾಸಕರು
ಶಿಕ್ಷಣ, ನೀರಾವರಿ, ಕೃಷಿ, ಗ್ರಾಮೀಣಾಭಿವೃದ್ಧಿಗೆ ಸೀಮಿತ. ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಹೆಚ್ಚಿನ ಪ್ರೋತ್ಸಾಹ ಇಲ್ಲ. ಜಿಡಿಪಿ ಪ್ರಗತಿ ಏರಿಸುತ್ತೇವೆ ಆದರೆ ಹೇಗೆ ಎಂಬುದನ್ನು ಹೇಳಿಲ್ಲ.
- ಕುಂಬ್ಳೆ ನರಸಿಂಹ ಪ್ರಭು, ಕೈಗಾರಿಕೋದ್ಯಮಿ, ಮಂಗಳೂರು
ಅಡಕೆ ಸುಲಿಯುವ ಯಂತ್ರಕ್ಕೆ ತೆರಿಗೆ ಕಡಿತ, ಕೊಕ್ಕೊ ಬೀಜ ಸಿಪ್ಪೆ ತೆರಿಗೆ ಕಡಿತ ಮಾಡಿದ್ದಾರೆ ರೈತರಿಗೆ ಅನುಕೂಲ. ಆದರೆ ಅನುದಾನ ಬಿಡುಗಡೆ ಮತ್ತು ತೆರಿಗೆ ಕಡಿತ ತಕ್ಷಣ ಜಾರಿಯಾಗಬೇಕು.
- ಕೊಂಕೋಡಿ ಪದ್ಮನಾಭ, ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಅಧ್ಯಕ್ಷ