ಹೆಬ್ರಿ ತಾಲೂಕು ಕೈಬಿಟ್ಟ ಸರ್ಕಾರ: ಪ್ರತಿಭಟನೆ, ಸಿಎಂ ಪ್ರತಿಕೃತಿ ದಹನ
ಹೆಬ್ರಿ: ಎಂ.ಬಿ. ಪ್ರಕಾಶ್ ನೇತೃತ್ವದ ಸರ್ಕಾರದ ತಾಲೂಕು ಪುನರ್ ರಚನಾ ಆಯೋಗ ಹೆಬ್ರಿಯನ್ನು 32 ಗ್ರಾಮಗಳ ತಾಲೂಕು ಮಾಡಬೇಕೆಂದು ಸಮಿತಿಯು ಶಿಫಾರಸು ಮಾಡಿದ್ದರೂ ರಾಜ್ಯ ಸರ್ಕಾರ ಶುಕ್ರವಾರ ರಾಜ್ಯದಲ್ಲಿ ತಾಲೂಕು ಘೋಷಣೆ ಮಾಡಿ ಹೆಬ್ರಿಯನ್ನು ಕೈಬಿಟ್ಟಿದ್ದು ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿ ಮತ್ತು ವಿವಿಧ ಸಂಘಸಂಸ್ಥೆಗಳು ಸರ್ಕಾರದ ವಿರುದ್ಧ ಶುಕ್ರವಾರ ಹೆಬ್ರಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದವು.
ಈ ಸಂದರ್ಭ ಮುಖ್ಯಮಂತ್ರಿ ಪ್ರತಿಕೃತಿ ದಹನ ಮಾಡಿ ಸರ್ಕಾರ ಮತ್ತು ಮುಖ್ಯಮಂತ್ರಿಗೆ ಧಿಕ್ಕಾರ ಹಾಕಲಾಯಿತು.
ಹೆಬ್ರಿಯನ್ನು ತಾಲೂಕಾಗಿ ಘೋಷಣೆ ಮಾಡದಿದ್ದರೆ ತೀವ್ರ ಹೋರಾಟ, ಉಪವಾಸ ಸತ್ಯಾಗ್ರಹ, ಕಾನೂನು ಹೋರಾಟದ ಮೊರೆ ಹೋಗುವುದಾಗಿ ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿ ಮುಖ್ಯಸ್ಥ ನೀರೆ ಕೃಷ್ಣ ಶೆಟ್ಟಿ ಘೋಷಿಸಿದರು.
ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಸಾರ್ವಜನಿಕರು ಭಾಗವಹಿಸಿದ್ದರು. ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ, ಸಮಿತಿಯ ಪ್ರಮುಖ ಭಾಸ್ಕರ ಜೋಯಿಸ್, ಎಚ್.ಕೆ. ಶ್ರೀಧರ ಶೆಟ್ಟಿ, ಕರವೇಯ ಪ್ರಸನ್ನ ಕುಮಾರ್ ಶೆಟ್ಟಿ, ನವೀನ್ ಅಡ್ಯಂತಾಯ ಮಾತನಾಡಿದರು.
ಪ್ರಸನ್ನ ಬಲ್ಲಾಳ್, ಕಿರಣ್ ಬೋಳಾರ್, ಸುಮಾ ಅಡ್ಯಂತಾಯ, ಗೀತಾ ನಾಯಕ್, ಜಯಲಕ್ಷ್ಮೀ, ಲಕ್ಷ್ಮೀ ದಯಾನಂದ್, ಜಗದೀಶ ಹೆಗ್ಡೆ, ಲಕ್ಷ್ಮೀನಾರಾಯಣ ಜೋಯಿಸ್, ಸುಜಾತ ಲಕ್ಷ್ಮಣ ಆಚಾರ್ಯ, ಸುರೇಶ ಭಂಡಾರಿ, ಅಣ್ಣಪ್ಪ ಕುಲಾಲ್, ರಾಜೇಶ್ ಭಂಡಾರಿ ಇದ್ದರು.