ಕುಮಾರಧಾರಾದಲ್ಲಿ ವ್ಯಕ್ತಿಯನ್ನು ಮುಳುಗಿಸಿ ಕೊಂದ ಕಾಡಾನೆ
ಉಪ್ಪಿನಂಗಡಿ: ಕಡಬ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಎಂಬಲ್ಲಿ ಆನೆ ದಾಳಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿರುವ ಕುರಿತ ಶಂಕೆ ಶನಿವಾರ ನಿಜವಾಗಿದ್ದು, ಮೃತರು ಕುಶಾಲಪ್ಪ ಗೌಡ ಎಂದು ತಿಳಿದುಬಂದಿದೆ.
ಘಟನೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಂಭವಿಸಿದ್ದು, ಪ್ರತ್ಯಕ್ಷದರ್ಶಿ ಈ ಬಗ್ಗೆ ತಿಳಿಸಿದರಾದರೂ ಘಟನೆಯನ್ನು ಪ್ರಾರಂಭಿಕ ಹಂತದಲ್ಲಿ ವದಂತಿ ಎಂದು ನಂಬಿದ ಕಾರಣ ಸಾವು ದೃಢಪಟ್ಟಿರಲಿಲ್ಲ. ಆನೆ ಕುಮಾರಧಾರ ನದಿಯ ಬಳಿ ಬರುತ್ತಿದ್ದ ಪುಳಿಕುಕ್ಕು ನಿವಾಸಿ ಕುಶಾಲಪ್ಪ ಗೌಡರನ್ನು ಸೊಂಡಿಲಿನಿಂದ ಹೊಡೆದು ನೀರಿನಲ್ಲಿ ಮುಳುಗಿಸಿ ಕೊಂದಿದೆ ಎನ್ನಲಾಗಿದೆ. ಶನಿವಾರ ಮೃತದೇಹ ಪತ್ತೆಯಾಗಿ ನೀರಿನಿಂದ ಮೇಲೆತ್ತಲಾಗಿದೆ.
ಆನೆ ದಾಂದಲೆ: ಶುಕ್ರವಾರ ಕೋಡಿಂಬಾಳ ಪರಿಸರದಲ್ಲಿ ಆನೆ ಎಲ್ಲೆಂದರಲ್ಲಿ ದಾಂದಲೆ ನಡೆಸುತ್ತಾ ಇದ್ದು, ಜನ ಆತಂಕದಲ್ಲೇ ದಿನ ಕಳೆದಿದ್ದರು. ಉರುಂಬಿ ಭಾಗದಲ್ಲಿ ಕಾಣಿಸಿದ್ದ ಆನೆ ಬಳಿಕ ಪುಳಿಕುಕ್ಕು ಪ್ರದೇಶದಲ್ಲಿ ಕುಮಾರಧಾರ ನದಿಯ ಬದಿಯ ತಿರುಗಾಡುತ್ತಿತ್ತು. ಈ ಸಂದರ್ಭದಲ್ಲಿ ನಾಗೇಶ್ ಎಂಬ ವ್ಯಕ್ತಿಯನ್ನು ನದಿಯಲ್ಲಿ ಮುಳುಗಿಸಿ ಕೊಂದಿದೆ ಎನ್ನುವ ಸುದ್ದಿ ಹಬ್ಬಿತ್ತಾದರೂ ನಾಗೇಶ್ ಸುರಕ್ಷಿತವಾಗಿ ಮನೆಯಲ್ಲಿ ಪತ್ತೆಯಾದಾಗ ವದಂತಿ ಸುಳ್ಳೆಂದು ಅರಿವಾಯಿತು.
ಬಳಿಕ ಆನೆ ಒಬ್ಬರನ್ನು ನೀರಿನಲ್ಲಿ ಮುಳುಗಿಸಿರುವುದನ್ನು ದೂರದಿಂದ ನೋಡಿದ ಪ್ರತ್ಯಕ್ಷದರ್ಶಿ ತಿಳಿಸಿದ್ದರು. ಆದರೆ ಇದನ್ನೂ ವದಂತಿ ಎಂದು ಹೇಳಲಾಗುತ್ತಿದ್ದಾರೂ ಕುಶಾಲಪ್ಪ ಗೌಡ ನಾಪತ್ತೆಯಾಗಿದ್ದರಿಂದ ಮೃತಪಟ್ಟಿರುವ ಸಂಶಯ ಬಲಗೊಂಡಿತ್ತು. ಶನಿವಾರ ಬೆಳಿಗ್ಗೆ ನದಿ ದಡದಲ್ಲಿ ಹುಡುಕಾಟ ನಡೆಸಿದಾಗ ಕುಶಾಲಪ್ಪ ಗೌಡರ ಮೊಬೈಲ್ ಹಾಗೂ ಚಪ್ಪಲಿ ಕಾಣಿಸಿದೆ. ಗ್ರಾಮಸ್ಥರು ನದಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪುತ್ತೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ಬಾಸ್ ಆಗಮಿಸಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಪಂಜ ವಲಯ ಅರಣ್ಯಾಧಿಕಾರಿ ಮನೋಹರ ಚಿತ್ತವಾಡಗಿ ಉಪಸ್ಥಿತರಿದ್ದರು. ಆನೆಯ ದಾಳಿಗೆ ಬಲಿಯಾದ ಕುಶಾಲಪ್ಪ ಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಸಂಬಂಧ ಪತ್ರ ಬರೆಯಲಾಗುವುದ ಎಂದು ಬಿಜೆಪಿ ಮುಖಂಡ, ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.