ಯುಪಿಸಿಎಲ್ ಪರ ದೇವಿಪ್ರಸಾದ್ ಶೆಟ್ಟಿ ಹೇಳಿಕೆ: ರಾಜ್ಯ ರೈತ ಸಂಘ ಆರೋಪ
ಉಡುಪಿ: ಉಡುಪಿ ಪವರ್ ಕಾರ್ಪೊರೇಶನ್ ಲಿಮಿಟೆಡ್ (ಯುಪಿಸಿಎಲ್) ಉಷ್ಣ ವಿದ್ಯುತ್ ಸ್ಥಾವರವು ಉಡುಪಿ ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರ ಹೇಳಿಕೆ, ಅವರು ಈ ಸ್ಥಾವರದ ಪರವಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದು ರಾಜ್ಯ ರೈತ ಸಂಘ ಆರೋಪಿಸಿದೆ.
ದೇವಿಪ್ರಸಾದ್ ಶೆಟ್ಟಿ ಅವರು ಪತ್ರಿಕಾ ಹೇಳಿಕೆಯೊಂದರಲ್ಲಿ, ಯುಪಿಸಿಎಲ್ ಕಡಿಮೆ ದರದಲ್ಲಿ ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು, ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಆದರೆ, ಯುಪಿಸಿಎಲ್‌ನಿಂದ ರಾಜ್ಯ ಸರ್ಕಾರವು ವಿದ್ಯುತ್ ದರ ಮತ್ತು ಜಿಲ್ಲೆಗೆ ಕೇವಲ ಶೇ.8ರಷ್ಟು ವಿದ್ಯುತ್ ಪೂರೈಕೆ ಒಪ್ಪಂದ ಮಾಡಿಕೊಳ್ಳುವಾಗ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆಗ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಇಂಧನ ಸಚಿವರಾಗಿದ್ದರು. ಈಗ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸುವ ದೇವಿಪ್ರಸಾದ್ ಶೆಟ್ಟಿ ಅವರು ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಶೇ.8 ವಿದ್ಯುತ್ ಪೂರೈಕೆ ನಿಗದಿಪಡಿಸಿದಾಗಲೇ ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ಅದನ್ನು ಮಾಡದೆ, ಈಗ ನಿರಂತರ ವಿದ್ಯುತ್ ನೀಡಬೇಕೆಂದು ಹೇಳುತ್ತಿರುವುದು ಅವರ ಸಮಯ ಸಾಧಕತನವಾಗಿದೆ. ಅವರ ಈ ನಿಲುವಿನಿಂದ ಅವರು ಯುಪಿಸಿಎಲ್ ಪರ ಎಂಬುದು ಸಾಬೀತಾಗಿದೆ ಎಂದು ರೈತ ಸಂಘ ದೂರಿದೆ.
ಈ ಹಿಂದೆ, ಉಡುಪಿ ಜಿಲ್ಲೆಗೆ ಯುಪಿಸಿಎಲ್ ಬೇಡ, ಅದನ್ನು ರದ್ದುಗೊಳಿಸಬೇಕು ಎಂದು ಹೋರಾಟ ಮಾಡಿದ ದೇವಿಪ್ರಸಾದ್ ಈಗ ಈ ರೀತಿಯ ಹೇಳಿಕೆ ನೀಡುತ್ತಿರುವುದು ಅನುಮಾನಕ್ಕೆಡೆ ಮಾಡಿದೆ. ಬೆಳಪು ಗ್ರಾಪಂ ಅಭಿವೃದ್ಧಿಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿರುವ ಅವರು, ಯುಪಿಸಿಎಲ್ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಿಜಯಕುಮಾರ್ ಹೆಗ್ಡೆ ಆಗ್ರಹಿಸಿದ್ದಾರೆ.