ಶಿಕ್ಷಣಾಧಿಕಾರಿ ಸಂಜೀವ ದೇವಾಡಿಗಗೆ ವಿಶಿಷ್ಟ ಸೇವಾ ಪುರಸ್ಕಾರ
ಶಿರ್ವ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದಡಿ ಮೈಸೂರು ವಿಭಾಗ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡುವ 'ವಿಶಿಷ್ಟ ಸೇವಾ ಪುರಸ್ಕಾರ' ಕಾರ್ಕಳ ವಲಯದ ಜಯಂತಿ ನಗರ ಶಿಕ್ಷಣಾಧಿಕಾರಿ ಸಂಜೀವ ದೇವಾಡಿಗ ಅವರಿಗೆ ಲಭಿಸಿದೆ.
ಅವರು 1994ರಲ್ಲಿ ಸಾಣೂರು ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿ, ಕಾರ್ಕಳದ ಹೆರ್ಮುಂಡೆ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಮೂಲತಃ ಕಾರ್ಕಳ ದುರ್ಗಾ ತೆಳ್ಳಾರಿನವರಾದ ಸಂಜೀವ ದೇವಾಡಿಗ, ಶೈಕ್ಷಣಿಕ ನಾಯಕತ್ವ ಅಭಿವೃದ್ಧಿ (ಇಎಲ್ಡಿಎಫ್), ನಿರ್ವಹಣಾ ಅಭಿವೃದ್ಧಿ (ಎಮ್ಡಿಎಫ್), ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ (ಎಚ್ಆರ್ಡಿ), ಭಾರತ ಸೇವಾದಲದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, 'ನಲಿ ಕಲಿ' ಕಾರ್ಯಕ್ರಮದ ವಿವಿಧ ಹಂತದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿದ್ದಾರೆ.
ಜ.30ರಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ಡಾ. ಅಜಯ ನಾಗಭೂಷಣ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು, ಈ ಸಂದರ್ಭ ಮೈಸೂರು ವಿಭಾಗದ ಸಹನಿರ್ದೇಶಕ ಕೆ. ಆನಂದ (ಆಡಳಿತ), ಸಹನಿರ್ದೇಶಕಿ ಜೊಹಾರಾ ಜಬೀನ್ (ಅಭಿವೃದ್ಧಿ) ಇಲಾಖೆ ಅಧಿಕಾರಿಗಳು ಇದ್ದರು.
ಈಗಾಗಲೇ ಇವರ ಶೈಕ್ಷಣಿಕ ಸಾಧನೆಗಾಗಿ 2001ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2002ರಲ್ಲಿ ವಿಜ್ಞಾನ ಮಿತ್ರ- ರಾಜ್ಯ ಶಿಕ್ಷಕ ಪ್ರಶಸ್ತಿ, 2003ರಲ್ಲಿ ಭಾರತ ಸೇವಾದಲ ಜಿಲ್ಲಾ ಶಿಕ್ಷಕ ಪ್ರಶಸ್ತಿ ಲಭಿಸಿವೆ.