ಇಂದಿನಿಂದ ಅಡಪಾಡಿ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ, ಶತಚಂಡಿಯಾಗ
ಕಾರ್ಕಳ: ಸುತ್ತ ದಟ್ಟ ಹಸಿರು ಕಾಡಿನಿಂದಾವೃತ್ತಗೊಂಡು, ಪ್ರತಿಷ್ಠಾಪನೆಯಾಗಿ ಕೇವಲ 15 ವರ್ಷ ಅವಧಿಯಲ್ಲಿ ಜೀರ್ಣೋದ್ಧಾರಗೊಂಡು, 3 ವರ್ಷಗಳ ಅಂತರದಲ್ಲಿ 4 ಬಾರಿ ಬ್ರಹ್ಮಕುಂಭಾಭಿಷೇಕಗೊಂಡಿರುವ ಇಲ್ಲಿನ ಪಳ್ಳಿ ಗ್ರಾಮದ ಅಡಪಾಡಿಯ ಶ್ರೀಉಮಾಮಹೇಶ್ವರ ಮತ್ತು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಮಂಗಳವಾರದಿಂದ 16ರವರೆಗೆ 5ನೇ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಮತ್ತು ಶತಚಂಡಿ ಯಾಗಕ್ಕೆ ಸನ್ನದ್ಧವಾಗಿದೆ.
ಪ್ರಸ್ತುತ ಶ್ರೀಉಮಾಮಹೇಶ್ವರ ದೇವಳದ ಸುತ್ತುಪೌಳಿ, ಶಿಲಾಮಯ ಅಣ್ಣಪ್ಪ ಸ್ವಾಮಿ ಗುಡಿ, ಉಭಯ ದೇವಾಲಯಗಳ ಮುಂಭಾಗದಲ್ಲಿ ಶಿಲಾವಿನ್ಯಾಸಗಳೊಂದಿಗೆ ಮುಖದ್ವಾರ ಸಹಿತ ನೂತನವಾಗಿ ನಿರ್ಮಾಣಗೊಂಡ ರಾಜಗೋಪುರ, ಚಂದ್ರಶಾಲೆ, ರಾಜಾಂಗಣ, ಶ್ರೀದೇವಳದ ಮುಂಭಾಗದಲ್ಲಿ ಪುಷ್ಕರಿಣಿ(ಸರೋವರ), ಶ್ರೀಕ್ಷೇತ್ರದ ಕಾರಣಿಕ ದೈವ ಶ್ರೀಕಲ್ಕುಡ ಕಲ್ಲುರ್ಟಿ ದೈವಸ್ಥಾನದ ನವೀಕರಣ, ಶಿಲಾಮಯ ಗುಡಿ ಹಾಗೂ ಮುಂಭಾಗದ ತಗಡು ಚಪ್ಪರ, ಅದರ ಹಿಂಭಾಗದಲ್ಲಿ ಎರಡು ಕೋಣೆಗಳಿರುವ ಕಟ್ಟಡ ಇತ್ಯಾದಿಗಳು ಪೂರ್ಣಗೊಂಡು ಸಮರ್ಪಣೆಗೆ ಸಿದ್ಧವಾಗಿವೆ ಶಿಲಾವಿನ್ಯಾಸ ಕಾಮಗಾರಿಗಳನ್ನು ಖ್ಯಾತ ಶಿಲ್ಪಿ ಕಾರ್ಕಳ ಗೋಪಾಲ ಮೇಸ್ತ್ರಿಯವರ ಪುತ್ರ ಕುಪ್ಪು ಸ್ವಾಮಿ ಮತ್ತು ಬಳಗ ನೆರವೇರಿಸಿದೆ.
ಕೈವಲ್ಯ ಮಠಾಧೀಶ ಶ್ರೀಶಿವಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತಿಯಲ್ಲಿ, ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಮುಂದಾಳುತ್ವದಲ್ಲಿ, ಹಿರ್ಗಾನ ಲಕ್ಷ್ಮೀಪುರದ ವೇದಮೂರ್ತಿ ಮೃಗೇಶ ಭಟ್ ಮತ್ತು ವೇದಮೂರ್ತಿ ದಯಾನಂದ ಭಟ್ ಕಲ್ಲಡ್ಕ ವೈದಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಂಗಳವಾರದಿಂದ ವೈವಿಧ್ಯಮಯ ಧಾರ್ಮಿಕ ವೈದಿಕ ಅನುಷ್ಠಾನಗಳು ಆರಂಭವಾಗಲಿದ್ದು, 14ರಂದು ಶ್ರೀಉಮಾಮಹೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ನೂತನ ಚಂದ್ರಶಾಲಾ ಉದ್ಘಾಟನೆ, 15ರಂದು ಶ್ರೀದೇವಿಗೆ ಬ್ರಹ್ಮ ಕುಂಭಾಭಿಷೇಕ, ಶತಚಂಡಿ ಯಾಗ, 16ರಂದು ದೈವಗಳಿಗೆ ನೇಮೋತ್ಸಾಹ ಇತ್ಯಾದಿಗಳು ನಡೆಯಲಿವೆ ಎಂದು ದೇವಳ ಪ್ರಕಟಣೆ ತಿಳಿಸಿದೆ.
--