ಚೌರಾಸಿಯಗೆ ಉಡುಪಿಯಲ್ಲಿ ಚಿಕಿತ್ಸೆ
ಉಡುಪಿ: ಅಂತಾರಾಷ್ಟ್ರೀಯ ಖ್ಯಾತಿಯ ಬಾನ್ಸುರಿ ವಾದಕ, ಸಂಗೀತ ನಿರ್ದೇಶಕ ಪಂಡಿತ್ ಹರಿಪ್ರಸಾದ್ ಚೌರಾಸಿಯ ಅವರು ತಮ್ಮ ಭುಜದ ನೋವಿನ ಚಿಕಿತ್ಸೆಗೆ ಗುಟ್ಟಾಗಿ ಉಡುಪಿಗೆ ಆಗಮಿಸಿದ್ದಾರೆ.
75ರ ಹರೆಯದ ಚೌರಾಸಿಯ ಅವರ ಎಡಭುಜ ಮತ್ತು ತೋಳಿನ ನಡುವೆ ನೋವು ಕಾಣಿಸಿಕೊಂಡು ಅವರ ಎಡಗೈ ನಡುಗುವುದಕ್ಕೆ ಆರಂಭವಾಗಿದ್ದು, ಕೊಳಲು ವಾದನಕ್ಕೆ ಕಷ್ಟವಾಗುತ್ತಿದೆ. ಕಳೆದ 5 ದಶಕಗಳಿಂದ ನಿರಂತರವಾಗಿ ಕೊಳಲು ವಾದನ ಮಾಡುತ್ತಿರುವುದರಿಂದ ಅವರ ಭುಜದೊಳಗೆ ನೋವು ಆರಂಭವಾಗಿದೆ ಎಂದು ಅವರಿಗೆ ಉಡುಪಿ ಸಮೀಪದ ಶಿರೂರು ಮೂಲ ಮಠದ ಪರಿಸರದಲ್ಲಿರುವ ಸಾಯಿರಾಧ ರೆಸಾರ್ಟ್ನಲ್ಲಿ ಚಿಕಿತ್ಸೆ ನೀಡುತ್ತಿರುವ ಆಯುರ್ವೇದ ವೈದ್ಯ ಡಾ. ತನ್ಮಯ ಗೋಸ್ವಾಮಿ ತಿಳಿಸಿದ್ದಾರೆ.
'ಇಲ್ಲಿಗೆ ಬಂದು 4 ದಿನಗಳಾಗಿವೆ, ಆಯುರ್ವೇದಿಕ್ ಚಿಕಿತ್ಸೆ ನಡೆಯುತ್ತಿದೆ. ಆದರೆ, ನನಗೆ ಇದು ಚಿಕಿತ್ಸೆ ಎಂದೇ ಅನ್ನಿಸುತ್ತಿಲ್ಲ. ಸುಂದರ ಪರಿಸರದಲ್ಲಿ ಇಲ್ಲಿನ ಮನಸ್ಸಿಗೆ ಶಾಂತಿ ಲಭಿಸಿದೆ. ಭುಜ ನೋವು ಕೂಡ ಕಡಿಮೆಯಾಗಿದೆ' ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಮ್ಮ ಸಂಗೀತ ಕಚೇರಿಗಳಿಗಾಗಿ ನಾಲ್ಕೈದು ಬಾರಿ ಉಡುಪಿಗೆ ಆಗಮಿಸಿರುವ ಪಂಡಿತ್ ಅವರು, ತಮಗೆ ಕರ್ನಾಟಕ ಎಂದರೆ ಬಹಳ ಇಷ್ಟ, ಅದಕ್ಕಾಗಿ ತಮ್ಮ ಚಿಕಿತ್ಸೆಗೆ ಕರ್ನಾಟಕವನ್ನೇ ಆಯ್ದುಕೊಂಡೆ ಎಂದು ಹೇಳಿದರು. ತಮ್ಮ ಅನಾರೋಗ್ಯದ ಬಗ್ಗೆ ಸುದ್ದಿ ಇಲ್ಲದೇ ಇಲ್ಲಿಗೆ ಬಂದಿರುವ ಅವರು ಫೆ. 15ರವರೆಗೆ ಅವರು ಇಲ್ಲಿ ಚಿಕಿತ್ಸೆ ಪಡೆಯಲಿದ್ದು, ನಂತರ ಅಲಹಾಬಾದ್ ಕುಂಭಮೇಳಕ್ಕೆ ತೆರಳಲಿದ್ದಾರೆ.
ಫೆವಿಕಾಲ್... ಕೂಡ ಒಂದು ಹಾಡಾ..?: ಇತ್ತೀಚೆಗೆ ಬಂದ 'ಫೆವಿಕಾಲ್ ಸೇ ಚಿಪ್ಕಾಲೋ...' ಎಂಬಂತಹ ಹಾಡುಗಳನ್ನು ನೀಡುವುದಕ್ಕೆ ನಾನು ಸಿದ್ಧ ಇಲ್ಲ, ಅದೂ ಕೂಡ ಒಂದು ಹಾಡಾ? ಈ ಕವಿಗಳಿಗೆ ಶಬ್ದಗಳೇ ಸಿಗುವುದಿಲ್ವಾ ಎಂದು ಪಂಡಿತ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಸುಮಾರು ದಶಕಗಳ ಹಿಂದೆ ಸಿಲ್ಸಿಲಾ, ಫಾಸ್ಲಾ, ಸಾಹಿಬನ್ ಇತ್ಯಾದಿ ಸಿನೆಮಾಗಳಿಗೆ ಅದ್ಭುತ ಸಂಗೀತ ನೀಡಿರುವ ಪಂಡಿತ್ ಅವರು ಲಮ್ಹೆ, ಡರ್ನಂತಹ ಕಮರ್ಷಿಯಲ್ ಹಿಟ್ ಸಿನೆಮಾಗಳಿಗೂ ಸಂಗೀತ ನೀಡಿದ್ದಾರೆ. ಆದರೆ, ಇತ್ತೀಚೆಗೆ ಯಾವುದೇ ಸಿನೆಮಾಗಳಿಗೆ ಸಂಗೀತ ನೀಡಿಲ್ಲ. ಕೇಳಿದಾಗ, ನಾನು ಸಂಗೀತ ನಿರ್ದೇಶನಕ್ಕೆ ಆಸಕ್ತಿಯಾಗುವಂತಹ ಸಿನೆಮಾಗಳೇ ಬರ್ತಾ ಇಲ್ಲ. ಆದ್ದರಿಂದ ಸಂಗೀತ ನೀಡುತ್ತಿಲ್ಲ. ಮುಂದೆ ಒಳ್ಳೆಯ ಸಿನೆಮಾಗಳಿಗೆ ಯಾರಾದ್ರೂ ಅವಕಾಶ ಕೊಟ್ಟರೇ ಖಂಡಿತಾ ಸಂಗೀತ ನಿರ್ದೇಶನ ಮಾಡುತ್ತೇನೆ ಎಂದರು.
ಚೋಲಿ ಕಾ ಪೀಚೆ ಕ್ಯಾ ಹೈ... ಎಂದೊಬ್ಬ ಹಾಡು ಬರೆದಿದ್ದಾನೆ, ಬೇರೆಯವರು ಬಿಡಿ, ಆ ಕವಿಯೇ ತನ್ನ ಹೆಂಡತಿ ಮಗಳು ಜೊತೆಗಿರುವಾಗ ಈ ಹಾಡನ್ನು ಕೇಳುವುದಕ್ಕೆ ಸಾಧ್ಯವಿದೆಯೇ..? ಹಣಕ್ಕಾಗಿ ಇಷ್ಟು ಕೆಳಗೆ ಇಳಿಯಬೇಕಾ ಎಂದವರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ಉಡುಪಿಯಲ್ಲಿಯೂ ಸಂಗೀತ ಗುರುಕುಲ
ಈಗಾಗಲೇ ತಮ್ಮ ಸಂಗೀತ ಸಾಧನೆಗೆ ಕಾರಣವಾದ ಮುಂಬೈಯಲ್ಲಿ 2002ರಲ್ಲಿ ಮತ್ತು ತಾವು ಸಂಗೀತಗಾರನಾಗಿ ರೇಡಿಯೋದ ಮೂಲಕ ಹೊರಜಗತ್ತಿಗೆ ಪರಿಚಯವಾದ ಒಡಿಶಾದ ಭುವನೇಶ್ವರದಲ್ಲಿ ಈಗಾಗಲೇ ದಾನಿಗಳ ನೆರವಿನಿಂದ ಗುರು ಶಿಷ್ಯ ಪರಂಪರಾಗತ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ನೀಡುವ ಗುರುಕುಲಗಳನ್ನು ಪಂಡಿತ್ ಆರಂಭಿಸಿದ್ದಾರೆ. ಮುಂದೆ ಉಡುಪಿಯಲ್ಲಿಯೂ ಸಾಕಷ್ಟು ಭೂಮಿ ಲಭಿಸಿದರೆ ಸಂಗೀತ ಗುರುಕುಲವೊಂದನ್ನು ಆರಂಭಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಗುರುಕುಲದಲ್ಲಿ ಸಂಗೀತ ಕಲಿಕೆ, ಊಟ, ವಸತಿ ಎಲ್ಲವೂ ಉಚಿತವಾಗಿರುತ್ತದೆ. ಇಲ್ಲಿ ಎಲ್ಲಾ ಬಗೆಯ ಸಂಗೀತ, ಹಾಡು ಬರೆಯುವುದು, ರಾಗ ಸಂಯೋಜನೆ ಮಾಡುವುದನ್ನು ಹೇಳಿಕೊಡಲಾಗುತ್ತದೆ. ಯಾರಿಗೂ ಪ್ರಮಾಣ ಪತ್ರ ನೀಡುವುದಿಲ್ಲ, ಯಾಕಂದರೆ ಪ್ರಮಾಣಪತ್ರ ನೀಡುವುದಕ್ಕೆ ಸಂಗೀತದಲ್ಲಿ ಕಲಿತಾಯಿತು ಎನ್ನುವುದೇ ಇಲ್ಲ, ಅಲ್ಲದೇ ಅದು ಉದ್ಯೋಗ ಕೂಡ ಅಲ್ಲ. ಅದು ಒಂದು ಆರಾಧನೆ ಎಂದವರು ಹೇಳಿದರು.
ತಾನು ಗುರುಮಾ ಅನ್ನಪೂರ್ಣ ದೇವಿ (ದಿವಂಗತ ಪಂ. ರವಿಶಂಕರ್ ಅವರ ಮೊದಲ ಪತ್ನಿ) ಅವರಿಂದ ಆರಂಭಿಕ ಸಂಗೀತ ಕಲಿತೆ, ಈಗಲೂ ನನ್ನ ಶಿಷ್ಯರಿಂದ ಕಲಿಯುತ್ತಿದ್ದೇನೆ. ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿರುವ ಆಧುನಿಕತೆ, ತಂತ್ರಜ್ಞಾನವನ್ನು ಅವರಿಂದ ತಿಳಿದುಕೊಳ್ಳುತ್ತಿದ್ದೇನೆ ಎಂದವರು ಹೇಳಿದರು.