ಪಂ.ಹರಿಪ್ರಸಾದ್ ಚೌರಾಸಿಯಾರಿಗೆ ಉಡುಪಿಯಲ್ಲಿ ಚಿಕಿತ್ಸೆ
ಉಡುಪಿ: ಅಂತಾರಾಷ್ಟ್ರೀಯ ಖ್ಯಾತಿಯ ಬಾನ್ಸುರಿ ವಾದಕ, ಸಂಗೀತ ನಿರ್ದೇಶಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರು ತಮ್ಮ ಭುಜದ ನೋವಿನ ಚಿಕಿತ್ಸೆಗೆ ಉಡುಪಿಗೆ ಆಗಮಿಸಿದ್ದಾರೆ.
75ರ ಹರೆಯದ ಚೌರಾಸಿಯಾ ಅವರ ಎಡಭುಜ ಮತ್ತು ತೋಳಿನ ನಡುವೆ ನೋವು ಕಾಣಿಸಿಕೊಂಡು ಅವರ ಎಡಗೈ ನಡುಗುವುದಕ್ಕೆ ಆರಂಭವಾಗಿದ್ದು, ಕೊಳಲು ವಾದನಕ್ಕೆ ಕಷ್ಟವಾಗುತ್ತಿದೆ.
5 ದಶಕಗಳಿಂದ ನಿರಂತರವಾಗಿ ಕೊಳಲು ವಾದನ ಮಾಡುತ್ತಿರುವುದರಿಂದ ಅವರ ಭುಜದೊಳಗೆ ನೋವು ಆರಂಭವಾಗಿದೆ ಎಂದು ಅವರಿಗೆ ಉಡುಪಿ ಸಮೀಪದ ಶಿರೂರು ಮೂಲ ಮಠದ ಪರಿಸರದಲ್ಲಿರುವ ಸಾಯಿರಾಧ ರೆಸಾರ್ಟ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ಆಯುರ್ವೇದ ವೈದ್ಯ ಡಾ. ತನ್ಮಯ ಗೋಸ್ವಾಮಿ ತಿಳಿಸಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್ ಚೌರಾಸಿಯಾ, ಇಲ್ಲಿಗೆ ಬಂದು 4 ದಿನಗಳಾಗಿವೆ. ಆಯುರ್ವೇದಿಕ್ ಚಿಕಿತ್ಸೆ ನಡೆಯುತ್ತಿದೆ.
ಆದರೆ, ನನಗೆ ಇದು ಚಿಕಿತ್ಸೆ ಎಂದನಿಸುತ್ತಿಲ್ಲ. ಇಲ್ಲಿನ ಸುಂದರ ಪರಿಸರದಲ್ಲಿ ಮನಸ್ಸಿಗೆ ಶಾಂತಿ ಲಭಿಸಿದೆ. ಭುಜ ನೋವು ಕೂಡ ಕಡಿಮೆಯಾಗಿದೆ. ನನಗೆ ಕರ್ನಾಟಕ ಎಂದರೆ ಬಹಳ ಇಷ್ಟ. ಅದಕ್ಕಾಗಿ ಚಿಕಿತ್ಸೆಗೆ ಕರ್ನಾಟಕವನ್ನೇ ಆಯ್ದುಕೊಂಡೆ. ಫೆ.15ರವರೆಗೆ ಇಲ್ಲಿ ಚಿಕಿತ್ಸೆ ಪಡೆದು ನಂತರ ಅಲಹಾಬಾದ್ ಕುಂಭಮೇಳಕ್ಕೆ ತೆರಳಲಿದ್ದೇನೆ ಎಂದರು.