ಸುನೀತಾ ಲೋಬೋಗೆ ಜಿಲ್ಲಾ ನಾಗರಿಕ ಸಮಿತಿ ಅಭಿನಂದನೆ
ಉಡುಪಿ: ಇತ್ತೀಚಿಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಚಳಿಗಾಲದ ವಿಶೇಷ ಒಲಿಂಪಿಕ್ಸ್ ಫ್ಲೋರ್ ಹಾಕಿಯಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಆಟಗಾರ್ತಿ, ಮಾನಸ ಪುನರ್ವಸತಿ ಕೇಂದ್ರದ ವಿದ್ಯಾರ್ಥಿನಿ ಸುನೀತಾ ಲೋಬೊ ಅವರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಉಡುಪಿ ಹಳೆ ತಾಲೂಕು ಕಚೇರಿಯಿಂದ ಸುನೀತಾ ಲೋಬೊ ಅವರನ್ನು ಭವ್ಯ ಮೆರವಣಿಗೆಯೊಂದಿಗೆ ಕೆ. ಎಂ. ಮಾರ್ಗ, ಸರ್ವೀಸ್ ಬಸ್ ನಿಲ್ದಾಣ, ಬಡಗುಪೇಟೆ ಮಾರ್ಗವಾಗಿ ಶ್ರೀ ಕೃಷ್ಣ ಮಠದ ರಾಜಾಂಗಣಕ್ಕೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ಸುನೀತಾ ಲೋಬೊ ಅವರಿಗೆ ಹೂಹಾರ ಹಾಕಿ ಅಭಿನಂದಿಸಿದರು. ಇದರಲ್ಲಿ ವಿಶೇಷ ಮಕ್ಕಳು, ಹಿರಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ನಂತರ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಪರ್ಯಾಯ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರು ಸುನೀತಾ ಲೋಬೊ ಅವರನ್ನು ಸನ್ಮಾನಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಶಕ್ತಿ ಹಾಗೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ. ಪ್ರಯತ್ನ ಇದ್ದರೆ ಯಾವುದೇ ಸಾಧನೆ ಮಾಡಬಹುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭಾ ಪೌರಾಯುಕ್ತ ಗೋಕುಲದಾಸ್ ನಾಯಕ್, ಪರ್ಯಾಯ ಸೋದೆ ಮಠದ ದಿವಾಣ ವೇದಮೂರ್ತಿ ಪಾಡಿಗಾರು ಶ್ರೀನಿವಾಸ ತಂತ್ರಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲಶೆಟ್ಟಿ, ಜಿಲ್ಲಾ ಕ್ರೀಡಾಧಿಕಾರಿ ಮಧುಕರ್, ತಾಲೂಕು ಕ್ರೀಡಾಧಿಕಾರಿ ಬಸವರಾಜ್, ಮಾನಸ ಸಂಸ್ಥೆಯ ಅಧ್ಯಕ್ಷೆ ರೆಮಿಡಿಯಾ ಡಿಸೋಜ, ಪ್ರಾಂಶುಪಾಲೆ ಸಿಸ್ಟರ್ ಸ್ಟೆಲ್ಮಾ, ದೈಹಿಕ ಶಿಕ್ಷಣ ಶಿಕ್ಷಕ ಲೋಹಿತಾಶ್ವ ಶೆಟ್ಟಿ ,ಸುನೀತಾಳ ತಾಯಿ ಹೆಲೆನ್ ಲೋಬೊ, ಹಿರಿಯ ಕ್ರೀಡಾಪಟುಗಳಾದ ಉದಯ್ ಶೆಟ್ಟಿ, ಅರುಣಾ ಕಲಾ, ಸುಲತಾ ಕಾಮತ್, ಜ್ಯೋತಿ ಶೆಟ್ಟಿ ಇದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ವಳಕಾಡು ಸ್ವಾಗತಿಸಿದರು. ಗಣೇಶ್ ರಾಜ್ ಸರಳಬೆಟ್ಟು ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.