ವೈದ್ಯಾಧಿಕಾರಿ, ಸಿಬ್ಬಂದಿ ನೇಮಕಕ್ಕೆ ಆಗ್ರಹ- ಸಹಿ ಸಂಗ್ರಹ ಅಭಿಯಾನ
ಉಡುಪಿ: ಶಿರ್ವ ಪೇಟೆಗೆ 108 ಆ್ಯಂಬುಲೆನ್ಸ್ ಸೇವೆ ಹಾಗೂ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹಾಗೂ ಇನ್ನಿತರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವಂತೆ ಆಗ್ರಹಿಸಿ ಗುರುವಾರ ಶಿರ್ವ ಪೇಟೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಸಹಿ ಸಂಗ್ರಹಣಾ ಅಭಿಯಾನವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಸದಸ್ಯ ನಾರ್ಬಟ್‌ಮಚಾದೊ, ಅತ್ಯಧಿಕ ಜನಸಂಖ್ಯೆ ಇರುವ ಶಿರ್ವ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇಷ್ಟೊಂದು ದೊಡ್ಡ ಆರೋಗ್ಯ ಕೇಂದ್ರದಲ್ಲಿ ಕೇವಲ ಓರ್ವ ವೈದ್ಯಾಧಿಕಾರಿ ಮಾತ್ರ ಇದ್ದು, ಅವರಿಂದ ಕೇಂದ್ರದ ಸಂಪೂರ್ಣ ನಿರ್ವಹಣೆ ಅಸಾಧ್ಯವಾಗಿದೆ. ಇಲ್ಲಿ ಸಿಬ್ಬಂದಿ ವರ್ಗದವರ ಸಂಖ್ಯೆಯು ಕಡಿಮೆ ಇದ್ದು, ಜನರಿಗೆ ಸರಿಯಾದ ಸೇವೆ ಲಭ್ಯ ಆಗುತ್ತಿಲ್ಲ. ಶಿರ್ವ ಪರಿಸರದಲ್ಲಿ ಅತ್ಯಧಿಕ ಸಂಖ್ಯೆಯ ಜನಸಂಖ್ಯೆ ಇದ್ದರೂ ಇಲ್ಲಿಯ ಜನರಿಗೆ ಸಕಾಲದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ಜನರು ಖಾಸಗಿ ಆ್ಯಂಬುಲೆನ್ಸ್‌ನ್ನು ನೆಚ್ಚುವ ಪರಿಸ್ಥಿತಿ ಇದೆ. ಆದ್ದರಿಂದ ತುರ್ತಾಗಿ ಶಿರ್ವ ಪೇಟೆಗೆ ಆ್ಯಂಬುಲೆನ್ಸ್ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ಭರ್ತಿಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮಾತ್ರವಲ್ಲ ಲಯನ್ಸ್ ಕ್ಲಬ್ ವತಿಯಿಂದ ಸಂಗ್ರಹಿಸಿದ ಸಹಿಯನ್ನು ರಾಜ್ಯ ಆರೋಗ್ಯ ಮಂತ್ರಿಗಳಾದ ಅರವಿಂದ ಲಿಂಬಾವಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಅಧ್ಯಕ್ಷ ಮೆಲ್ವಿನ್ ಅರನ್ಹಾ, ಕಾರ್ಯದರ್ಶಿ ರಮಾನಂದ ಶೆಟ್ಟಿಗಾರ್, ಪೀಟರ್ ಮಥಾಯಸ್, ರೋನಾಲ್ಡ್ ಮೆನೇಜಸ್, ವಿಲ್ಸನ್ ಡಿ' ಸೋಜಾ, ಅರುಲ್ ಡಿ' ಸೋಜಾ ಮತ್ತಿತರರು ಇದ್ದರು.