ಕೊಚುವೇಲಿ- ಅಮೃತಸರ ರೈಲು ಉಡುಪಿಯಲ್ಲೂ ನಿಲ್ಲಲಿ
ಉಡುಪಿ: ಎರ್ನಾಕುಲಂ- ಪೂನಾ ಎಕ್ಸ್‌ಪ್ರೆಸ್ ರೈಲನ್ನು ಉಡುಪಿಯಲ್ಲಿ ನಿಲ್ಲಲು ಡಿ.12ರಿಂದ ಅವಕಾಶ ಸಿಕ್ಕಿದೆ. ಆದರೆ, ಕೊಚುವೇಲಿಯಿಂದ ಡೆಹ್ರಾಡೂನ್ ಮತ್ತು ಕೊಚುವೇಲಿಯಿಂದ ಅಮೃತಸರಕ್ಕೆ ಹೋಗುವ ರೈಲಿನ್ನೂ ಉಡುಪಿಯಲ್ಲಿ ನಿಲ್ಲುತ್ತಿಲ್ಲ. ತಕ್ಷಣ ಇದರ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೇ ಏಪ್ರಿಲ್‌ನಲ್ಲಿ ರೈಲ್ ರೋಕೋ ಮಾಡುವುದಾಗಿ ರೇಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಎಚ್ಚರಿಸಿದ್ದಾರೆ.
ಫೆ. 26ರಂದು ಮಂಡನೆಯಾಗುವ ಭಾರತೀಯ ರೇಲ್ವೆ ಬಜೆಟ್ ಹಿನ್ನೆಲೆಯಲ್ಲಿ ಉಡುಪಿ ರೇಲ್ವೆ ಯಾತ್ರಿ ಸಂಘದ ವತಿಯಿಂದ ಭಾನುವಾರ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ನಡೆದ ಪೂರ್ವಾಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಇಂದ್ರಾಳಿ ರೈಲು ನಿಲ್ದಾಣದಲ್ಲಿ ಆಟೋ ರಿಕ್ಷಾಗಳಿಗೆ ಪ್ರಿಪೇಯ್ಡ್ ಕೌಂಟರ್ ತೆರೆದದ್ದು ಪ್ರಯಾಣಿಕರಿಗೆ ಖುಷಿ ತಂದಿದೆ ಎಂದರು.
ನಿಲುಗಡೆ ಅವಧಿ ಹೆಚ್ಚು ಬೇಡ: ಯಶವಂತಪುರ- ಕಾರವಾರ ರೈಲು ಪ್ರತಿಯೊಂದು ಸ್ಟೇಷನ್‌ನಲ್ಲಿ 5 ನಿಮಿಷ ನಿಲ್ಲಿಸುವಲ್ಲಿಗೆ 15- 20 ನಿಮಿಷ ನಿಂತು ಹೋಗುತ್ತಿದ್ದು, ಪ್ರಯಾಣಿಕರಿಗೆ ಕಷ್ಟವಾಗುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ರೇಲ್ವೆ ಅಧಿಕಾರಿಗೆ ಲಿಖಿತ ದೂರನ್ನು ನೀಡುವುದಾಗಿ ಡಯಾಸ್ ತಿಳಿಸಿದರು.