ರಸ್ತೆ ಅಪಘಾತ: ಓರ್ವ ಸಾವು
ಕುಂದಾಪುರ: ಇಲ್ಲಿನ ರಾ.ಹೆ. 66ರ ನಾಗೂರು ಸಮೀಪ ಭಾನುವಾರ ಬೆಳ್ಳಂಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತರು ಇಲ್ಲಿನ ಖಾರ್ವಿ ಕೇರಿಯ ಸಂದೇಶ್ ಖಾರ್ವಿ. ಅವರು ಮುಂಜಾನೆ 3 ಗಂಟೆಗೆ ಓಮ್ನಿ ಕಾರಿನಲ್ಲಿ ಕುಂದಾಪುರದತ್ತ ಸಾಗುತ್ತಿದ್ದಾಗ ಮುಂಭಾಗದಿಂದ ಬಂದ ಗೂಡ್ಸ್ ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಶನಿವಾರ ರಾತ್ರಿ ಹೊನ್ನಾವರದಲ್ಲಿ ನಡೆದ ಕಬಡ್ಡಿ ಪಂದ್ಯಾಟ ನೋಡಲು ತನ್ನ ಸ್ನೇಹಿತರಾದ ಪ್ರಶಾಂತ್ ಖಾರ್ವಿ, ಪ್ರಸಾದ್ ಖಾರ್ವಿ, ಆಕಾಶ್ ಖಾರ್ವಿ, ಸುನಿಲ್ ಖಾರ್ವಿ, ಸನತ್ ಖಾರ್ವಿ ಹಾಗೂ ರಿತೇಶ್ ಮೇಸ್ತ ಎಂಬವರೊಂದಿಗೆ ತೆರಳಿದ್ದರು. ಮಳೆಯ ಕಾರಣ ಕಬಡ್ಡಿ ಪಂದ್ಯಾಟ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಹೊನ್ನಾವರದಿಂದ ಹಿಂತಿರುಗಿದ್ದರು. ಈ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಪ್ರಸಾದ್ ಹಾಗು ಪ್ರಶಾಂತ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾಮಾನ್ಯ ಗಾಯಗೊಂಡ ಇತರರಿಗೆ ಉಳಿದವರನ್ನು ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂದೇಶ್ ಸಮಾಜ ಸೇವಕರಾಗಿದ್ದು, ನಾಗರಾಜ್ ಖಾರ್ವಿ ಅವರ ಸಹೋದರನಾಗಿದ್ದು, ಮೀನು ವ್ಯವಹಾರ ಮಾಡಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಬಬ್ಬು ಕುದ್ರುವಿನಲ್ಲಿ ಜರಗಿದ್ದು, ಅಸಂಖ್ಯಾತ ಜನರು ಭಾಗವಹಿಸಿದ್ದರು.