ಪಡುಬಿದ್ರಿ- ಚಿಕ್ಕಲಗೋಡು ರಸ್ತೆ ಕಾಮಗಾರಿ: ವಾಹನ ಸಂಚಾರ ನಿಷೇಧ
ಶಿವಮೊಗ್ಗ: ಉಡುಪಿ ಜಿಲ್ಲೆಯ ಪಡುಬಿದ್ರಿ- ಚಿಕ್ಕಲಗೋಡು (ರಾಜ್ಯ ಹೆದ್ದಾರಿ ನಂ.1ರ) ರಸ್ತೆಯ ಆಗುಂಬೆ ಘಾಟ್ ಪ್ರದೇಶದ ಕಿ.ಮೀ. 73.91ರಿಂದ 76.80ರವರೆಗೆ ಡಾಂಬರೀಕರಣ ಕಾಮಗಾರಿಯನ್ನು ಸೋಮವಾರ ಆರಂಭಿಸಿದ್ದು, 28ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚರಿಸುವುದನ್ನು ನಿಷೇಧಿಸಲಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸವಾರರು ಮತ್ತು ಚಾಲಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬಹುದು. ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಆಗುಂಬೆ ತನಕ ಸಂಚರಿಸುವ ವಾಹನಗಳಿಗೆ ಯಾವುದೇ ಅಡಚಣೆಯಿರುವುದಿಲ್ಲ.
ತೀರ್ಥಹಳ್ಳಿಯಿಂದ ಉಡುಪಿ, ಕಾರ್ಕಳಕ್ಕೆ ಸಂಚರಿಸುವ ವಾಹನಗಳು ಕೊಪ್ಪ-ಶೃಂಗೇರಿ, ಕುದುರೆಮುಖ- ಬಜಗೋಳಿ ಮುಖಾಂತರ ಕಾರ್ಕಳ, ಉಡುಪಿ ತಲುಪಬಹುದು. ಉಡುಪಿ, ಕಾರ್ಕಳದಿಂದ ತೀರ್ಥಹಳ್ಳಿ ಹಾಗೂ ಮುಂದಕ್ಕೆ ಚಲಿಸುವ ವಾಹನಗಳು ರಾಜ್ಯ ಹೆದ್ದಾರಿ- 13ರಲ್ಲಿ ಮುಯಾರು- ಬಜಗೋಳಿ-ಶೃಂಗೇರಿ- ಕೊಪ್ಪ ಮಾರ್ಗವಾಗಿ ತೀರ್ಥಹಳ್ಳಿ ತಲುಪಬಹುದು.
ತೀರ್ಥಹಳ್ಳಿಯಿಂದ ಕುಂದಾಪುರ, ಬೈಂದೂರು ಕಡೆ ಚಲಿಸುವ ವಾಹನಗಳು, ಮಾಸ್ತಿಕಟ್ಟೆ, ಬಾಳೆಬರೆ ಘಾಟಿ, ಸಿದ್ದಾಪುರ- ಕಂಡ್ಲೂರು ಮುಖಾಂತರ ಚಲಿಸಬಹುದು. ಅದೇ ರೀತಿ ಬೈಂದೂರು, ಕುಂದಾಪುರ ಕಡೆಯಿಂದ ತೀರ್ಥಹಳ್ಳಿಗೆ ಸಂಚರಿಸುವ ವಾಹನಗಳು ಕಂಡ್ಲೂರು- ಸಿದ್ದಾಪುರ- ಬಾಳೆಬರೆ ಘಾಟಿ ಮಾಸ್ತಿಕಟ್ಟೆ ಮಾರ್ಗವಾಗಿ ತೀರ್ಥಹಳ್ಳಿ ತಲುಪಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಆದೇಶಿಸಿದ್ದಾರೆ.