ಮುಷ್ಕರಕ್ಕೆ ವೈದ್ಯಕೀಯ, ಮಾರಾಟ ಪ್ರತಿನಿಧಿಗಳ ಬೆಂಬಲ
ಬ್ರಹ್ಮಾವರ: ವಿವಿಧ ಕಾರ್ಮಿಕ ಸಂಘಟನೆಗಳು ಬೇಡಿಕೆಗಳನ್ನು ಮುಂದಿಟ್ಟು ಹಮ್ಮಿಕೊಳ್ಳಲಾದ ಬುಧವಾರ ಮತ್ತು ಗುರುವಾರ ದೇಶವ್ಯಾಪಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಮಂಗಳೂರು ಘಟಕ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ.
ವೈದ್ಯರೂ ಸಹಕರಿಸಿ: 2 ದಿನದ ಮುಷ್ಕರದಲ್ಲಿ ಪಾಲ್ಗೊಂಡು ಕೆಲಸಕ್ಕೆ ಗೈರು ಹಾಜರಾಗಲಿದ್ದಾರೆ. ಎಲ್ಲಾ ನರ್ಸಿಂಗ್‌ಹೋಮ್ ಮತ್ತು ಕ್ಲಿನಿಕ್‌ಗಳ ವೈದ್ಯರು ಸಹಕರಿಸಬೇಕು ಎಂದು ಮದುಸೂಧನ ಹೇರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸಂಸ ಬೆಂಬಲ: ಕಾರ್ಮಿಕ ಹಿತಾಸಕ್ತಿಯ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರದ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತನ್ನ ಬೆಂಬಲ ವ್ಯಕ್ತಪಡಿಸಿದೆ.
ಬೆಲೆಏರಿಕೆ ನಿಯಂತ್ರಣ, ಕನಿಷ್ಠ ಕೂಲಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿ, ಎಫ್‌ಡಿಐ ಮೊದಲಾದ ಹತ್ತು ಹಲವು ಬೇಡಿಕಗಳು ನಾಡಿನ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನ ಪ್ರಶ್ನೆಯಾಗಿರುವುದರಿಂದ ದೇಶದ 11 ಸಂಘಟನೆಗಳು ಕರೆ ನೀಡಿರುವ ಈ ಮುಷ್ಕರಕ್ಕೆ ಬೆಂಬಲಿಸಲಾಗುವುದು ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಜಯನ್‌ಮಲ್ಪೆ ಮತ್ತು ಸಂಚಾಲಕ ಸುಂದರ ಕಪ್ಪೆಟ್ಟು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.