ಭಾರತ್ ಬಂದ್: ಕುಂದಾಪುರದಲ್ಲಿ ಮಿಶ್ರಪ್ರತಿಕ್ರಿಯೆ
ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ನಗರ ಪ್ರದೇಶದಲ್ಲಿ ಬಂದ್ ನಡೆದರೂ ಗ್ರಾಮೀಣ ಪ್ರದೇಶದಲ್ಲಿ ಬಂದ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ಬೆಳಗ್ಗೆ ಕೆಲವು ಸಂಘಟನೆಗಳ ಕಾರ್ಯಕರ್ತರು ರಾ.ಹೆ. 66ರಲ್ಲಿ ಪ್ರತಿಭಟಿಸಲು ಮುಂದಾದರು. ಆದರೆ ಪೊಲೀಸರು ಅವರನ್ನು ಚದುರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿದರು. ಕುಂದಾಪುರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ, ಬೈಕ್ ರ್ಯಾಲಿ ಹಾಗೂ ಪ್ರತಿಭಟನಾ ಸಭೆಗಳು ನಡೆಯಿತು.
ಗುರುವಾರವೂ ಖಾಸಗಿ ಬಸ್ಗಳು ರಸ್ತೆಗಿಳಿಯದ ಕಾರಣ ಇಲ್ಲಿನ ಪ್ರಯಾಣಿಕರು ಪರದಾಡುವಂತಾಯಿತು. ಆಟೋರಿಕ್ಷಾಗಳ ಓಡಾಟವೂ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಇನ್ನಷ್ಟು ಪರದಾಡುವಂತಾಯಿತು. ಶಾಲಾ - ಕಾಲೇಜುಗಳು ತೆರೆದಿದ್ದವು. ಕುಂದಾಪುರ ಪೇಟೆ ಹೊರತುಪಡಿಸಿದರೆ ಹೆಮ್ಮಾಡಿ, ಗಂಗೊಳ್ಳಿ, ತಲ್ಲೂರು, ಕೋಟೇಶ್ವರ, ಕುಂಭಾಸಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವ್ಯಾಪಾರ ವ್ಯವಹಾರ ಎಂದಿನಂತಿತ್ತು.