ಮಣಿಪಾಲ: ಸಂವಹನ ಉತ್ಸವ ಉದ್ಘಾಟನೆ
ಮಣಿಪಾಲ: ಮಾಧ್ಯಮಗಳಲ್ಲಿ ಮಾಹಿತಿ ಮತ್ತು ಅಭಿವೃದ್ಧಿಗಳ ಉತ್ಪ್ರೇಕ್ಷೆಯ ನಡುವೆ ಮಾನವೀಯತೆ ಕಳೆದುಹೋಗುತ್ತಿದೆ ಎಂದು ಕವಿ ಜಯಂತ ಕಾಯ್ಕಿಣಿ ವಿಷಾದಿಸಿದರು.
ಅವರು ಗುರುವಾರ ಇಲ್ಲಿನ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ ಇದರಲ್ಲಿ ನಡೆದ ಸಂವಹನ ಉತ್ಸವ 'ಆರ್ಟಿಕಲ್- 19'ನ್ನು ಉದ್ಘಾಟಿಸಿ, ಮಾತನಾಡಿದರು.
ಮಾಧ್ಯಮಗಳು ತನ್ನ ಪ್ರಖರತೆಯ ನಡುವೆ ಮಾನವೀಯತೆಯನ್ನು ಮರೆಯಬಾರದು. ಆಗ ಮಾತ್ರ ಮಾಧ್ಯಮಗಳು ಸಮಾಜದ ಅಭಿವೃದ್ಧಿಗೆ ಕೊಡುಗೆ ಕೊಡಬಲ್ಲವು ಎಂದಭಿಪ್ರಾಯಪಟ್ಟರು.
ಪ್ರತಿಯೊಬ್ಬರಲ್ಲಿಯೂ ಮಗುವಿನ ಕುತೂಹಲ ಮತ್ತು ತಾಯಿಯ ಮಮತೆ ಇರಬೇಕು. ಆಗ ಮಾತ್ರ ಮಾನವೀಯತೆಯ ಸಮಾಜ ನಿರ್ಮಾಣ ಸಾಧ್ಯ. ಡಾ. ರಾಜ್ಕುಮಾರ್ ಅವರು ವೀರಪ್ಪನ್ ಬಂಧನದಲ್ಲಿದ್ದಾಗಲೂ ಆತನ ಪೊದೆ ಮೀಸೆಯನ್ನು ಮುಟ್ಟುವ ಆಸೆ ವ್ಯಕ್ತಪಡಿಸಿದ್ದರು. ಅದು ಅವರಲ್ಲಿದ್ದ ಮಗುವಿನ ಮುಗ್ಧತೆಯಾದರೇ, ವೀರಪ್ಪನ್ ಯಾವಾಗ ಬಂಧ ಮುಕ್ತನಾಗುತ್ತಾನೆ ಎಂದು ಕೇಳಿದ್ದು ಅವರಲ್ಲಿದ್ದ ತಾಯಿಯ ಅಂತಃಕರಣ ಎಂದು ಕಾಯ್ಕಿಣಿ ವಿವರಿಸಿದರು.
ಮುಖ್ಯ ಅತಿಥಿಯಾಗಿ ಪರ್ಫೆಕ್ಟ್ ಮಿಡಿಯಾದ ಸಹಸ್ಥಾಪಕ ದಿಲೀಪ್ ಚೆರಿಯನ್ ಆಗಮಿಸಿದ್ದರು. ಎಂಐಸಿಯ ನಿರ್ದೇಶಕ ಪ್ರೊ. ವರದೇಶ್ ಹಿರೆಗಂಗೆ, ಗೌರವ ನಿರ್ದೇಶಕ ಎಂ.ವಿ. ಕಾಮತ್ ಇದ್ದರು. ಪ್ರಾಧ್ಯಾಪಕಿ ಚಿತ್ರ ಗಿರಿಧರ್ ಕಾರ್ಯಕ್ರಮ ಸಂಯೋಜಿಸಿದರು. ಭೌಮಿಕ್ ಜೋಷಿ ಪ್ರಾರ್ಥನಾ ಗೀತೆ ಹಾಡಿದರು. ರವಿರಾಜ್ ವಂದಿಸಿದರು.
ನಂತರ ವಿವಿಧ ವಿಚಾರಗೋಷ್ಠಿಗಳು, ಚಲನಚಿತ್ರ ಪ್ರದರ್ಶನ, ಸಂವಾದ ಕಾರ್ಯಕ್ರಮಗಳು ನಡೆದವು. 2 ದಿನಗಳ ಈ ಉತ್ಸವವು ಶುಕ್ರವಾರ ಸಮಾರೋಪಗೊಳ್ಳಲಿದೆ. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಸಾಂಸ್ಕೃತಿಕ ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ.
--
24ರಂದು ವಿವೇಕ್ ಹಾಸ್ಪಿಟಲ್ ಉದ್ಘಾಟನೆ
ಕುಂದಾಪುರ: ಎಲುಬು ಮತ್ತು ಕೀಲುಗಳ ಚಿಕಿತ್ಸೆಗಾಗಿಯೇ ಸ್ಥಾಪಿಸಲಾದ ವಿವೇಕ್ ಹಾಸ್ಪಿಟಲ್ 24 ರಂದು ಕುಂದಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ.
ಸಂಸದ ಜಯಪ್ರಕಾಶ್ ಹೆಗ್ಡೆ ಅವರು ವಿವೇಕ ಹಾಸ್ಪಿಟಲ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸುವರು.
ಉಡುಪಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ, ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಕೆ. ಮೋಹನದಾಸ ಶೆಣೈ ಉಪಸ್ಥಿತರಿರುವರು.