ಚಿಕ್ಕಮಗಳೂರು- ಸಕಲೇಶಪುರ ರೇಲ್ವೆ ಮಾರ್ಗಕ್ಕೆ ಅನುಮೋದನೆ: ಜಯಪ್ರಕಾಶ್ ಹೆಗ್ಡೆ ಅಭಿನಂದನೆ
ಉಡುಪಿ: ರಾಜ್ಯದ ಬಹುದಿನದ ಕನಸಾದ ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೇಲ್ವೆ ಮಾರ್ಗಕ್ಕೆ ರೇಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ಅನುಮೋದನೆ ನೀಡಿರುವುದಕ್ಕೆ ಉಡುಪಿ- ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದಾರೆ.
ಕಡೂರು- ಚಿಕ್ಕಮಗಳೂರು- ಬೇಲೂರು- ಸಕಲೇಶಪುರ ರೈಲ್ವೆ ಮಾರ್ಗದ ಸಂಪರ್ಕ ಕೊಡಿಸುವುದಾಗಿ ಅಂದಿನ ಪ್ರಧಾನ ಮಂತ್ರಿ ದಿ.ಇಂದಿರಾ ಗಾಂಧಿ 1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆ ಸಂದರ್ಭ ಅಶ್ವಾಸನೆ ನೀಡಿದ್ದರು. ನಂತರ ರೇಲ್ವೆ ಸಚಿವರಾಗಿದ್ದ ಸಿ.ಕೆ. ಜಾಫರ್ ಷರೀಫ್ 94- 95ರಲ್ಲಿ ಮಂಡಿಸಿದ ರೈಲ್ವೆ ಬಜೆಟ್ನಲ್ಲಿ ಈ ಮಾರ್ಗಕ್ಕೆ ಅನುಮೋದನೆ ನೀಡಿ ಸರ್ವೇ ಕಾರ್ಯವನ್ನು ಚಾಲನೆಗೊಳಿಸಿದ್ದರು.
ತಾಂತ್ರಿಕ ಕಾರಣದಿಂದ ಯೋಜನೆ ಕಾರ್ಯರೂಪಕ್ಕೆ ಬರಲು ವಿಳಂಬವಾಯಿತು. ಇದೀಗ ಕಡೂರು- ಚಿಕ್ಕಮಗಳೂರು ನಡುವೆ 47 ಕಿಮೀ. ರೇಲ್ವೆ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಅದರ ಮುಂದುವರಿದ ಮಾರ್ಗ ಚಿಕ್ಕಮಗಳೂರು- ಬೇಲೂರು- ಸಕಲೇಶಪುರ (46 ಕಿ.ಮೀ.) ರೇಲ್ವೆ ಮಾರ್ಗಕ್ಕೆ ಈ ಬಾರಿಯ ಬಜೆಟ್ನಲ್ಲಿ ಅನುಮೋದನೆ ನೀಡಿರುವುದರಿಂದ ಈ ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲಿದೆ ಎಂದು ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದಾರೆ.