ರಸ್ತೆ ಮಧ್ಯೆ ಕೊಳಚೆ: ಕಡೆಕಾರು ಪಂಚಾಯಿತಿ ವಿರುದ್ಧ ಪ್ರತಿಭಟನೆ
ಉಡುಪಿ: ಇಲ್ಲಿನ ಕಡೆಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 120 ಮನೆಗಳಿರುವ ಕುತ್ಪಾಡಿ, ಕಟ್ಟೆಗುಡ್ಡೆ ಪರಿಸರದಲ್ಲಿ ಕೊಳಚೆ ನೀರು ಚರಂಡಿಯಲ್ಲಿ ಹರಿಯದೇ ರಸ್ತೆ ಮಧ್ಯೆ ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಬಿಜೆಪಿ ಗ್ರಾಮ ಪಂಚಾಯಿತಿ ಸದಸ್ಯರು ಕೊಳಚೆ ನೀರಿನಲ್ಲಿಯೇ ಕುಳಿತು ಪಂಚಾಯಿತಿ ವಿರುದ್ಧ ಪ್ರತಿಭಟನೆ ನಡೆಸಿದರು.
ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಕುತ್ಪಾಡಿ, ಪ್ರದೀಪ್ ಚಂದ್ರ, ವೀಣಾ ಪ್ರಕಾಶ್, ಭಾಸ್ಕರ ಶೆಟ್ಟಿ, ರಮೇಶ್ ಆಚಾರ್ಯ, ನವಚೇತನ ಯುವಕ ಮಂಡಳದ ಅಧ್ಯಕ್ಷ ಅಶೋಕ್ ಪಾಲನ್ ಮತ್ತು ಸ್ಥಳೀಯ ಹಿರಿಯರು, ಮಹಿಳೆಯರು, ಮಕ್ಕಳು ಆ ಕೊಳಚೆ ನೀರಿನಲ್ಲಿಯೇ ಕುಳಿತು ಪ್ರತಿಭಟಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ರಘುಪತಿ ಭಟ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಂಜುನಾಥಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಶಾಸಕರು ತಾತ್ಕಾಲಿಕವಾಗಿ ಕೊಳಚೆ ನೀರನ್ನು ತೆಗೆಸಿದರು ಹಾಗೂ ಶಾಶ್ವತ ಪರಿಹಾರ ಮಾಡುವ ಭರವಸೆ ನೀಡಿದರು. ಆದರೆ, ಪಂಚಾಯಿತಿ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಆಗಮಿಸದೇ ಇದ್ದುದರ ಬಗ್ಗೆ ಪ್ರತಿಭಟನಾಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.