ಅಡಿಗ ಕೊಲೆಗೆ ಆಸ್ತಿಯೇ ಕಾರಣ
ಉಡುಪಿ: ಆರ್.ಟಿ.ಐ. ಕಾರ್ಯಕರ್ತ, ಕುಂದಾಪುರದ ವಂಡಾರು ಗ್ರಾಮದ ವಾಸುದೇವ ಅಡಿಗ ತಾವು ನಡೆಸುತ್ತಿದ್ದ ಆರ್ಟಿಐ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕೊಲೆಯಾಗದೇ, ತಮ್ಮ ನೆರೆಮನೆಯ ರಮೇಶ್ ಬಾಯರಿ ಎಂಬವರೊಂದಿಗೆ ಹೊಂದಿದ್ದ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕೊಲೆಯಾಗಿದ್ದಾರೆಂಬ ಬಗ್ಗೆ ಪೊಲೀಸರಿಗೆ ಖಚಿತ ಪುರಾವೆಗಳು ಲಭ್ಯವಾಗಿವೆ. ಸ್ವಯಂಘೋಷಿತ ಮಂತ್ರವಾದಿ ಬಾಯರಿ ಅವರ ಬೆಂಗಳೂರಿನ 6 ಶಿಷ್ಯರು ಜ.7ರಂದು ಅಡಿಗರನ್ನು ಕೊಲೆಗೈದು, ಶವವನ್ನು ಚಿಕ್ಕಮಗಳೂರಿನ ಕಡೂರು ತಾಲೂಕಿನ ಎಮ್ಮೆದೊಡ್ಡಿಯ ಮದಗದಕೆರೆಗೆ ಎಸೆದಿದ್ದರು. ಈ ಕೊಲೆಗೆ ಹಣಕಾಸಿನ ಸಹಾಯ ಮಾಡಿರುವ ಬಾಯರಿ ಅವರ ಭಾವ ಸುಬ್ರಹ್ಮಣ್ಯ ಉಡುಪ ಮತ್ತು ಕೊಲೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.