30 ಆರೋಗ್ಯ ಮಾಹಿತಿ, ವಿಚಾರ ಸಂಕಿರಣ (ಸುದ್ದಿ ಸಂಕ್ಷೇಪ)
ಕುಂದಾಪುರ: ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಜ.30 ರಂದು ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಆರೋಗ್ಯ ಮಾಹಿತಿ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಎಚ್ಐವಿ, ಏಡ್ಸ್, ಡಯಾಬಿಟಿಸ್, ಕ್ಯಾನ್ಸರ್ ಕುರಿತು ವಿಶೇಷ ಪ್ರಚಾರ ಆಂದೋಲನದ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕುಂದಾಪುರ ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅಶೋಕ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ, ಪ್ರಭಾರ ವೈದ್ಯ ಆಡಳಿತಾಧಿಕಾರಿ ಡಾ.ಚಿಕ್ಕಮರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸತ್ಯನಾರಾಯಣ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಂದಾಡಿ: ಅಂಬೇಡ್ಕರ್ ಭವನ ಉದ್ಘಾಟನೆ
ಉಡುಪಿ: ಇಲ್ಲಿನ ಹಂದಾಡಿ ಗ್ರಾಪಂ ವ್ಯಾಪ್ತಿಯ ಬೇಳೂರು ಜಡ್ಡಿನಲ್ಲಿರುವ ದಲಿತ ಕಾಲನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಸಕರ ಅನುದಾನದಿಂದ ಸುಮಾರು ರು. 10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಅಂಬೇಡ್ಕರ್ ಭವನವನ್ನು ಉಡುಪಿ ಶಾಸಕ ಕೆ. ರಘುಪತಿ ಭಟ್, ಊರಿನ ಹಿರಿಯ ನರಸಿಂಹ ಮಾಸ್ತರ್ ಹಂದಾಡಿ ಇತ್ತೀಚೆಗೆ ಉದ್ಘಾಟಿಸಿದರು.ಜಿಪಂ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ತಾಪಂ ಸದಸ್ಯೆ ಉಷಾ ಕೃಷ್ಣ ಪೂಜಾರಿ, ಗ್ರಾಪಂ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಇತರರು ಇದ್ದರು.
ಭೂ ಒತ್ತುವರಿ; ಮಾಜಿ ಸಿಎಂ ಅರ್ಜಿ ವಿಚಾರಣೆ ಮುಂದಕ್ಕೆ
ಬೆಂಗಳೂರು: ಭೂ ಒತ್ತುವರಿ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಲೋಕಾಯುಕ್ತ ನ್ಯಾಯಾಲಯ ಫೆ.4ಕ್ಕೆ ಮುಂದೂಡಿದೆ. ಬಾಗಲೂರು ಬಳಿ 8.5 ಗುಂಟೆ ಗೋಮಾಳ ಜಮೀನು ಖರೀದಿಸಲು ಡಿ.ವಿ. ಸದಾನಂದಗೌಡ ಹಾಗೂ ಅವರ ಪತ್ನಿ ನಕಲಿ ದಾಖಲೆ ಪತ್ರಗಳನ್ನು ನೀಡಿದ್ದರು ಎಂದು ನಾಗಲಕ್ಷ್ಮೀ ಬಾಯಿ ಆರೋಪಿಸಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಕಾರ್ಕಳ: ಶ್ರೀನೃತ್ಯಾಲಯದ ವಾರ್ಷಿಕೋತ್ಸವ ಉದ್ಘಾಟನೆ
ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಪ್ರೌಢಶಾಲಾ ಸಭಾಂಗಣದಲ್ಲಿ ಶ್ರೀನೃತ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಸಂಗೀತ ನೃತ್ಯ ಕಲಾ ಅಕಾಡೆಮಿ ಪ್ರಶಸ್ತಿ ವಿಜೇತ ಕೆ. ಚಂದ್ರಶೇಖರ ನಾವಡ ಉದ್ಘಾಟಿಸಿದರು. ನಾಟ್ಯನಿಲಯಂ ಮಂಜೇಶ್ವರದ ಶಿಕ್ಷಕ ಬಾಲಕೃಷ್ಣ ಮಂಜೇಶ್ವರ, ಕಾರ್ಕಳದ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ನಾವಡ ಸ್ವಾಗತಿಸಿದರು. ಶ್ರೀರಂಗ ಜೋಶಿ ವಂದಿಸಿದರು. ಕೇರಳದ ಕಲಾಮಂಡಲಂ ಕಥಕಳಿ ಸಂಘದವರಿಂದ ಪ್ರಹ್ಲಾದ ಚರಿತಂ ಎನ್ನುವ ರೂಪಕ ಪ್ರದರ್ಶನಗೊಂಡಿತು.