ಕುಕ್ಕಿಕಟ್ಟೆ: ವಿವೇಕ ಜಯಂತಿ ಆಚರಣೆ
ಉಡುಪಿ: ಸರಿ ತಪ್ಪು, ನ್ಯಾಯ ಅನ್ಯಾಯಗಳ ಬಗ್ಗೆ ಅರಿತು, ಸುಸಂಸ್ಕೃತರಾಗಿ ಬದುಕುವುದೆ ಮಾನವ ಧರ್ಮ, ಇದೇ ಸ್ವಾಮಿ ವಿವೇಕಾನಂದ ಅವರು ಬೋಧಿಸಿದ ಆದರ್ಶ. ಅವರ ಕರೆ ನೀಡಿದಂತೆ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮತ್ತು ಆತ್ಮಾಭಿಮಾನಗಳೆರಡನ್ನು ಮೈಗೂಡಿಸಿಕೊಂಡರೆ ಸತ್ಪ್ರಜೆಗಳಾಗಿ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ಜಸ್ಟೀಸ್ ಗುರುರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಕುಕ್ಕಿಕಟ್ಟೆಯಲ್ಲಿರುವ ಪೇಜಾವರ ಮಠದ ಶ್ರೀಕೃಷ್ಣ ಬಾಲನಿಕೇತನದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಾದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಕಾರ್ಯನಿರ್ವಾಹಕ ಪ್ರಕಾಶ್ ಅವರು ಸ್ವಾಮಿ ವಿವೇಕಾನಂದರ ಆದರ್ಶ ವ್ಯಕ್ತಿತ್ವವನ್ನು ವರ್ಣಿಸಿ, ರಾಷ್ಟ್ರಪ್ರೇಮಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಹೇಗೆ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದು ವಿವರಿಸಿದರು.
ಬಾಲನಿಕೇತನ ಟ್ರಸ್ಟಿನ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿದರು. ರಾಮಚಂದ್ರ ಉಪಾಧ್ಯಾಯ ವಂದಿಸಿದರು. ಪ್ರೊ. ನಾರಾಯಣ ಶೆಣೈ, ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಖಜಾಂಚಿ ರಘುರಾಮ ಆಚಾರ್ಯ ಇದ್ದರು.