ಟಿಪ್ಪು ಹೆಸರಿನ ವಿವಿಗೆ ಪೇಜಾವರ ಶ್ರೀ ಆಕ್ಷೇಪ
ಉಡುಪಿ: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲುದ್ದೇಶಿರುವ ವಿಶ್ವವಿದ್ಯಾಲಯಕ್ಕೆ ವಿವಾದಾತ್ಮಕ ಟಿಪ್ಪು ಸುಲ್ತಾನ್ ಹೆಸರು ಇಡುವುದಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿ.ವಿ.ಗೆ ವಿವಾದಾತೀತರಾದ ಭಕ್ತ ಕಬೀರ, ಶಿಶುನಾಶ ಶರೀಫ, ಮೌಲಾನಾ ಆಜಾದ್ ಅಥವಾ ಅಬ್ದುಲ್ ಕಲಾಂ ಹೆಸರು ಇಡುವಂತೆ ಸಲಹೆ ಮಾಡಿದ್ದಾರೆ.
ಒಂದೇ ವರ್ಗಕ್ಕೆ ಪ್ರಾಶಸ್ತ್ಯ ಸಲ್ಲ: ನಮ್ಮದು ಜಾತ್ಯತೀತ ದೇಶ. ಒಂದು ಧರ್ಮದವರಿಗೆ ವಿಶೇಷ ಪ್ರಾಶಸ್ತ್ಯವುಳ್ಳ ವಿ.ವಿ. ನಿರ್ಮಿಸುವುದರಲ್ಲಿಯೂ ಔಚಿತ್ಯವಿಲ್ಲ, ದೇಶದಲ್ಲಿ ಬಹುಸಂಖ್ಯಾತರನ್ನೂ ಅಲ್ಪಸಂಖ್ಯಾತರನ್ನೂ ಸಾಮಾನವಾಗಿ ನೋಡಬೇಕು, ಅವರಲ್ಲಿ ಒಂದು ವರ್ಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲಾಗುವ ವಿ.ವಿ.ಗೆ ಟಿಪ್ಪೂ ಸುಲ್ತಾನ್ ಹೆಸರಿಡುವ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಪೇಜಾವರ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಅನೇಕ ಮಂದಿ ಹೇಳುತ್ತಿರುವ ಹಿನ್ನೆಲೆಯಲ್ಲಿ, ಶ್ರೀಗಳು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ಈ ವಿಚಾರಗಳನ್ನು ತಿಳಿಸಿದ್ದಾರೆ.
ಮುಸ್ಲಿಮರ ಬಗ್ಗೆ ಪ್ರೀತಿಯಿದೆ: ದೇಶದ ಮುಸ್ಲಿಂ ನಾಯಕರು ಮತ್ತು ಮುಸ್ಲಿಂ ಸಮಾಜದ ಬಗ್ಗೆ ತಮಗೆ ವಿಶ್ವಾಸ-ಅಭಿಮಾನವಿದೆ, ಅವರ ಅನೇಕ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸಿದ್ದು, ತಮ್ಮನ್ನು ಅವರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಆದರೆ ಮುಸ್ಲಿಂ ಸಮಾಜದಲ್ಲಿರುವ ಕೇಲವೇ ಮಂದಿ ಉಗ್ರವಾದಿಗಳು-ಭಯೋತ್ಪಾದಕರ ಬಗ್ಗೆ ತಮಗೆ ತೀವ್ರ ಅಸಮಾಧಾನವಿದೆ, ಆದರೂ ದೇವರಲ್ಲಿ, ದೇಶದಲ್ಲಿ ಭಕ್ತಿಯುಳ್ಳ ಬಹುಸಂಖ್ಯಾತಮುಸ್ಲಿಂ ಸಮಾಜವನ್ನು ತಾವು ಪ್ರೀತಿಸುತ್ತಿರುವುದಾಗಿ ಶ್ರೀಗಳು ಹೇಳಿದ್ದಾರೆ.
ಮುಸ್ಲಿಂ ಸಮಾಜದಲ್ಲಿ ಪರಮತ ಸಹಿಷ್ಣುಗಳಾಗಿರುವ, ಹಿಂದೂ ಮತ್ತು ಮುಸ್ಲಿಂ ಎರಡೂ ಸಮಾಜದ ಅಭಿಮಾನಪಾತ್ರರಾಗಿರುವ ಅನೇಕ ಐತಿಹಾಸಿಕ ವ್ಯಕ್ತಿಗಳಿದ್ದಾರೆ. ಆದರೆ ಟಿಪ್ಪು ಸುಲ್ತಾನರ ಬಗ್ಗೆ ತೀವ್ರ ವಿವಾದವಿದೆ. ಈಗಾಗಲೇ ಡಾ. ಚಿದಾನಂದ ಮೂರ್ತಿ ಅವರು ಟಿಪ್ಪು ಮಾಡಿದ ಘೋರ ಕೃತ್ಯಗಳ ಬಗ್ಗೆ (ಟಿಪ್ಪು ಖಡ್ಗದಲ್ಲಿ ಕೆತ್ತಿದ ಮಾತುಗಳು, ಚಿಟ್ಟು ಅವರ ವಂಶಜರೇ ಹೇಳಿದ ಮಾತುಗಳು ಮುಂತಾದ) ಅನೇಕ ಸ್ಪಷ್ಟ ದಾಖಲೆಗಳನ್ನು ತೋರಿಸಿದ್ದಾರೆ. ಅವುಗಳಿಗೆ ಸರಿಯಾದ ಉತ್ತರ ನೀಡದೆ ಕೇವಲ ಚಿದಾನಂದಮೂರ್ತಿ ಹಾಗೂ ಬೈರಪ್ಪ ಹೇಳಿಕೆಗಳನ್ನು ಉಗ್ರಶಬ್ದಗಳಿಂದ ನಿರಾಕರಿಸಿದರೆ ಯಾರಿಗೂ ಸಮಾಧಾನವಾಗುವುದಿಲ್ಲ. ಅಂತಹ ಸರಿಯಾದ ಉತ್ತರವನ್ನು ಟಿಪ್ಪು ಬೆಂಬಲಿಗರು ಯಾರೂ ಇವರೆಗೆ ನೀಡಿಲ್ಲ. ಆದುದರಿಂದ ಶ್ರೀರಂಗಪಟ್ಟಣದ ವಿ.ವಿ.ಗೆ ಟಿಪ್ಪೂ ಅವರ ಹೆಸರಿನ ಬದಲು ಬೇರೆ ವಿವಾದಾತೀತರ ನಾಯಕರ ಹೆಸರಿಡುವುದು ಸೂಕ್ತ ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.