ತೋಡಿಗೆ ಬಿದ್ದ ಕಾರು: ಇಬ್ಬರಿಗೆ ಗಾಯ
ವಿಟ್ಲ: ವಿಟ್ಲ ಸಮೀಪದ ಇಡ್ಕಿದು ಗ್ರಾಮದ ಕಂಬಳಬೆಟ್ಟು- ಅರ್ಕೆಜಾರು ಸಂಪರ್ಕ ರಸ್ತೆ ಬಳಿ ಕಾರೊಂದು ತೋಡಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಇಡ್ಕಿದು ಗ್ರಾಮದ ಅರ್ಕೆಜಾರು ನಿವಾಸಿಗಳಾದ ಮೋನಪ್ಪ ಪೂಜಾರಿ ಎಂಬವರ ಪತ್ನಿ ಜಾನಕಿ ಹಾಗೂ ಅವರ ಸಹೋದರ ಐತಪ್ಪ ಪೂಜಾರಿ ಅವರ ಪತ್ನಿ ಜಯಂತಿ ಗಾಯಗೊಂಡವರು. ಕಾರು ಚಾಲಕ ಮೋನಪ್ಪ ಪೂಜಾರಿ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಈ ಮೂವರು ಬುಧವಾರ ಬೆಳಗ್ಗೆ ಮದುವೆ ಕಾರ್ಯಕ್ರಮಕ್ಕೆಂದು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ಕಾಲು ಸಂಕ ಕಿರಿದಾಗಿದ್ದೇ ಈ ಘಟನೆ ಕಾರಣ ಎನ್ನಲಾಗಿದೆ. ಗಾಯಾಳುಗಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.