ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪಾಸ್ ಹಿಂತಿರುಗಿಸದ ನಿರ್ವಾಹಕ: ಬಸ್ ತಡೆದು ಪ್ರತಿಭಟನೆ

Mainashree
Updated On : 24 Jan 2013, 11:15 am

ಪುತ್ತೂರು: ನಿಗದಿತ ನಿಲುಗಡೆಯ ಬಸ್‌ನಲ್ಲಿ ಬಂಟ್ವಾಳ ತಾಲೂಕಿನ ಮಾಣಿಯಿಂದ ಪುತ್ತೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸನ್ನು ಬಸ್ ನಿರ್ವಾಹಕ ತೆಗೆದುಕೊಂಡು ಹಿಂತಿರುಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನೆಹರೂನಗರದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಇದರಿಂದಾಗಿ ನೆಹರೂ ನಗರದಲ್ಲಿ ಕೆಲಕಾಲ ರಸ್ತೆ ತಡೆ ಉಂಟಾಯಿತು. ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಎಂದಿನ ಕೆಎಸ್‌ಆರ್‌ಟಿಸಿ ಬಸ್ ಬುಧವಾರ ಸಂಜೆ ಇಲ್ಲದ ಕಾರಣ ಪುತ್ತೂರು ಕಡೆಗೆ ತೆರಳುವ ಮಾಣಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ನಿಗದಿತ ನಿಲುಗಡೆಯ ಬಸ್ಸನ್ನೇರಿದ್ದರು. ಬಸ್ ನಿರ್ವಾಹಕ ವಿದ್ಯಾರ್ಥಿಗಳು ಬಸ್ ಪಾಸ್‌ನಲ್ಲಿ ತೆರಳುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಪರಿಶೀಲಿಸುವ ನೆಪದಲ್ಲಿ ಬಸ್ ಪಾಸ್‌ಗಳನ್ನು  ತೆಗೆದುಕೊಂಡು ಹಿಂತಿರುಗಿಸಲು ನಿರಾಕರಿಸಿದ್ದರು ಎನ್ನುವುದು ವಿದ್ಯಾರ್ಥಿಗಳ ಆರೋಪ. ಬಸ್‌ಪಾಸನ್ನು ನಿರ್ವಾಹಕ ಹಿಂತಿರುಗಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು, ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದರು. ಮಾಣಿ ಕಾಲೇಜಿನ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಬಸ್ ನೆಹರೂನಗರ ತಲುಪುತ್ತಿದ್ದಂತೆ ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸುಮಾರು ಅರ್ಧಗಂಟೆ ಕಾಲ ಹೆದ್ದಾರಿ ತಡೆಯುಂಟಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಸ್ಥಳೀಯರು, ಬಸ್‌ಪಾಸ್‌ಗಳನ್ನು ಹಿಂತಿರುಗಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಿದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement