ನಾಳೆ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್
ಪುತ್ತೂರು:ಸಾಮೆತ್ತಡ್ಕ ಯುವಕ ಮಂಡಲದ ವತಿಯಿಂದ ದಿ. ಸುನಿಲ್ ಮಸ್ಕರೇನಸ್ ಮತ್ತು ದಿ. ವಿಕ್ರಮ್ ಭಟ್ ಸ್ಮರಣಾರ್ಥ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಅಹ್ವಾನಿತ ತಂಡಗಳ ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾವಳಿ ಜ.26ರಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವಕ ಮಂಡಲದ ಅಧ್ಯಕ್ಷ ಲೋಹಿತ್ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಂದ್ಯಾಟವನ್ನು ಉದ್ಯಮಿ ಸುನಿಲ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಾಲೇಜು ಕ್ಯಾಂಪಸ್‌ನ ಉಸ್ತುವಾರಿ ಅಧಿಕಾರಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಜಯಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಆಗಮಿಸಲಿದ್ದು, ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಮಲ್ಲಿಕಾ ಪ್ರಸಾದ್, ಯು.ಟಿ. ಖಾದರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವಕ ಮಂಡಲದ ಕಾರ್ಯದರ್ಶಿ ಕವನ್, ಸದಸ್ಯರಾದ ರಿಯಾಝ್ ಮತ್ತು ಮಹೇಶ್ ಭಟ್ ಉಪಸ್ಥಿತರಿದ್ದರು.