ವ್ಯಾಪ್ತಿ ಮೀರಿದ ರಿಕ್ಷಾ ಮೇಲೆ ಕೇಸು: ನಾಗರಿಕರಿಂದ ಬಸ್ ಸಂಚಾರಕ್ಕೆ ತಡೆ
ಉಪ್ಪಿನಂಗಡಿ: ತಾಲೂಕು ವ್ಯಾಪ್ತಿ ದಾಟಿ ಪ್ರಯಾಣಿಕ ಸೇವೆ ನೀಡುತ್ತಿರುವ ಅಟೋ ರಿಕ್ಷಾಗಳ ಮೇಲೆ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿದ ಪ್ರಕರಣಕ್ಕೆ ಪ್ರತಿಕಾರವಾಗಿ ರಿಕ್ಷಾ ಚಾಲಕ ಮತ್ತು ನಾಗರಿಕರು ಖಾಸಗಿ ಬಸ್ಸನ್ನು ತಡೆ ಹಿಡಿದು ಸಂಚಾರಕ್ಕೆ ತಡೆಯುಂಟು ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ರಿಕ್ಷಾ ಚಾಲಕರು ಗಡಿ ಗ್ರಾಮವಾದ ಪುತ್ತೂರು ತಾಲೂಕಿನ ಉಪ್ಪಿನಂಗಡಿಗೆ ಪ್ರಯಾಣಿಕರನ್ನು ನಿಯಮಾನುಸಾರ ಕರೆದೊಯ್ಯುವಂತಿಲ್ಲ.
ಆದರೆ, ಗಡಿ ಪ್ರದೇಶದ ಊರುಗಳಿಗೆ ಸಮೀಪದ ಪ್ರಯಾಣಿಕರನ್ನು ಸಾಗಿಸಲು ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಅವಕಾಶ ನೀಡುತ್ತಿದ್ದರು. ಈ ಮಧ್ಯೆ ಖಾಸಗಿ ಬಸ್ಸು ಮಾಲಕರು, ರಿಕ್ಷಾ ಚಾಲಕರ ಪ್ರಯಾಣಿಕ ಸೇವೆಯಿಂದ ತಮಗೆ ನಷ್ಟವುಂಟಾಗುತ್ತಿದೆ ಎಂದು ದೂರಿರುವ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಎಸ್‌ಐ ರವಿ ಬಿ.ಎಸ್. ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಗುರುವಾರ ತಾಲೂಕು ವ್ಯಾಪ್ತಿ ಮೀರಿ ಪ್ರಯಾಣಿಕ ಸೇವೆ ನೀಡಿದ ರಿಕ್ಷಾ ಚಾಲಕನ ಮೇಲೆ ಕೇಸು ದಾಖಲಿಸಿದ ಪೊಲೀಸರು ರು. 400 ದಂಡ ತೆರುವಂತೆ ಸೂಚಿಸಿದರು.
ಪೊಲೀಸರ ಈ ಕ್ರಮದಿಂದ ಕೆಂಡಾಮಂಡಲವಾದ ಅಟೋ ಚಾಲಕರು ಮತ್ತು ನಾಗರಿಕರು ಸೇರಿಕೊಂಡು, ಪೊಲೀಸರಿಗೆ ದೂರು ನೀಡಿದ್ದಾರೆಂದು ಶಂಕಿಸಲಾದ ಖಾಸಗಿ ಬಸ್ಸನ್ನು ಬಂದಾರು ಗ್ರಾಮದ ಮೈರೋಳ್ತಡ್ಕ ಎಂಬಲ್ಲಿ ತಡೆ ಹಿಡಿದು, ಅದರಲ್ಲಿದ್ದ ಪ್ರಯಾಣಿಕರನ್ನು ಬಲವಂತವಾಗಿ ಇಳಿಸಿದರು ಎನ್ನಲಾಗಿದೆ. ಅಲ್ಲದೆ, ರಾತ್ರಿವರೆಗೆ ಬಸ್ಸನ್ನು ತಡೆಹಿಡಿದಿದ್ದರು.
ಬಸ್ಸನ್ನು ಬಿಡುಗಡೆಗೊಳಿಸದಿದ್ದರೆ ಕಾನೂನು ಕ್ರಮಕ್ಕೆ ತುತ್ತಾಗುವಿರೆಂಬ ಠಾಣಾಧಿಕಾರಿಯ ಎಚ್ಚರಿಕೆ, ಪ್ರಯಾಣಿಕ ಸೇವೆಗೆ ಅವಕಾಶ ನೀಡದಿದ್ದರೆ ಬಸ್ಸಿನ ಸೇವೆಗೂ ಅವಕಾಶ ನೀಡೆವು ಎಂಬ ನಾಗರಿಕರ ಧೋರಣೆ ಅನಪೇಕ್ಷಿತ ಘಟನಾವಳಿಗೆ ಕಾರಣವಾಗುವಂತಿದೆ.
ಅಧಿಕಾರಿಗಳು ನಾಗರಿಕರ ಅನುಕೂಲತೆಗಳನ್ನು ಬದಿಗಿಟ್ಟು ಕಾನೂನು ದೃಷ್ಟಿಯೊಂದನ್ನೇ ಮಾನ್ಯ ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.