ತಿರುಪತಿಯಲ್ಲಿ ವಸತಿಗೃಹ ನಿರ್ಮಾಣಕ್ಕೆ ತಡೆಯಾಜ್ಞೆ
ಕರ್ನಾಟಕ ಸರ್ಕಾರಕ್ಕೆ ಸೇರಿದ 7.60 ಎಕ್ರೆ ಭೂಮಿಯಲ್ಲಿ ವಸತಿ ಗೃಹ ನಿರ್ಮಾಣ ಕಾಮಗಾರಿ ಸ್ಥಗಿತ; ಕೋಟ
ಉಡುಪಿ: ತಿರುಪತಿಯಲ್ಲಿರುವ ಕರ್ನಾಟಕ ಸರ್ಕಾರಕ್ಕೆ ಸೇರಿರುವ 7.60 ಎಕ್ರೆ ಭೂಮಿಯಲ್ಲಿ ವಸತಿಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರ ರು. 15 ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿದ್ದರೂ, ಅಲ್ಲಿನ ನ್ಯಾಯಾವಾದಿಯೊಬ್ಬರು ಆಂಧ್ರ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ಕಾಮಗಾರಿ ಸ್ಥಗಿತಗೊಂಡಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಗುರುವಾರ ತಿರುಪತಿಯ ಗೋವಿಂದರಾಜಸ್ವಾಮಿ ದೇವಸ್ಥಾನದ ಬಳಿ ಕರ್ನಾಟಕ ಸರ್ಕಾರದ ಯಾತ್ರಿ ನಿವಾಸಕ್ಕೆ ಶಂಕುಸ್ಥಾಪನೆ ನೆರವೇರಿಸಿ, ತಿರುಚಾನೂರು ಶ್ರೀಪದ್ಮಾವತಿ ಅಮ್ಮನವರ ದೇವಸ್ಥಾನದ ಪುಷ್ಕರಣಿಯ ಮುಂಭಾಗದಲ್ಲಿ ನೂತನ ಮೈಸೂರು ಮಹಾರಾಜ ಕಲ್ಯಾಣ ಮಂಟಪವನ್ನು ಉದ್ಘಾಟಿಸಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೈಸೂರು ಮಹಾರಾಜರು ಕರ್ನಾಟಕ ಸರ್ಕಾರಕ್ಕೆ ತಿರುಪತಿಯಲ್ಲಿ ಈ 7.60 ಎಕ್ರೆ ಭೂಮಿಯನ್ನು ನೀಡಿದ್ದರು. ಆದರೆ, ಕಾರಣಾಂತರಗಳಿಂದ ಈ ಭೂಮಿ ಮಾಲೀಕತ್ವದ ಬಗ್ಗೆ ತಿರುಪತಿ ತಿರುಮಲ ದೇವಸ್ಯಂ (ಟಿ.ಟಿ.ಡಿ.) ಹಾಗೂ ಕರ್ನಾಟಕ ಸರ್ಕಾರದ ನಡುವೆ ತಗಾದೆ ಆರಂಭವಾಯಿತು. ಉಭಯ ರಾಜ್ಯಗಳ ಭಕ್ತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟಿಕೊಂಡು ಮಾತುಕತೆಗಳನ್ನು ನಡೆಸಲಾಯಿತು. ಕೊನೆಗೆ ಆಂಧ್ರ ಸರ್ಕಾರವು ಈ ಭೂಮಿಯಲ್ಲಿ 7.05 ಎಕ್ರೆ ಭೂಮಿಯನ್ನು ಕರ್ನಾಟಕ ಸರ್ಕಾರಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಿದೆ. ಅಮೇಲೆ ಅಲ್ಲಿ ಕರ್ನಾಟಕದ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ವಸತಿಗೃಹವನ್ನು ನಿರ್ಮಿಸಲು ಆರಂಭಿಸಲಾಯಿತು. ಆದರೆ, ತಿರುಪತಿಯ ನ್ಯಾಯಾವಾದಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಈ ನಿರ್ಮಾಣ ಕಾರ್ಯಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದೀಗ ಈ ವಸತಿ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದು ತಿಳಿಸಿದರು. ತಡೆಯಾಜ್ಞೆಯನ್ನು ಖುಲಾಸೆಗೊಳಿಸಲು ರಾಜ್ಯ ಸರ್ಕಾರ ಪರವಾಗಿ ಅಫಿದವಿತ್ ಸಲ್ಲಿಸಲಾಗಿದೆ. ಆದರೆ, ಈ ಆಂಧ್ರ ಸರ್ಕಾರ ಮತ್ತು ಟಿ.ಟಿ.ಡಿ. ಅಫಿದವಿತ್ ಸಲ್ಲಿಸದೇ ಇರುವುದರಿಂದ ನ್ಯಾಯಾಲಯದ ತೀರ್ಪು ವಿಳಂಬವಾಗುತ್ತಿದೆ. ಆದ್ದರಿಂದ ಕರ್ನಾಟಕ ಸರ್ಕಾರ, ಆಂಧ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವೇ ವಿವಾದವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ತಿರುಪತಿ ಪಟ್ಟಣದ ಗಾಂಧಿ ರಸ್ತೆಯಲ್ಲಿ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದ ಹತ್ತಿರ ಸುಮಾರು 110 ವರ್ಷಗಳ ಹಿಂದೆ ಮೈಸೂರು ಮಹಾರಾಜರು 1.10 ಎಕ್ರೆ ಭೂಮಿಯನ್ನು ಕರ್ನಾಟಕ (ಅಂದಿನ ಮೈಸೂರು) ಸರ್ಕಾರಕ್ಕೆ ನೀಡಿದ್ದು, 1901ರಲ್ಲಿ ಇಲ್ಲಿ ವಸತಿಗೃಹ, ಕಲ್ಯಾಣ ಮಂಟಪ, ವಾಣಿಜ್ಯ ಮಳಿಗೆಗಳನ್ನು ಕಟ್ಟಲಾಗಿತ್ತು. ಕಳೆದ 4 ದಶಕಗಳಿಂದ ಈ ಕಟ್ಟಡವು ಶಿಥಿಲಗೊಂಡಿದ್ದು, ಇದೀಗ ಅದನ್ನು ಕೆಡವಿ 4 ಅಂತಸ್ತಿನ ನೂತನ ಕಟ್ಟಡವನ್ನು ರು. 4.98 ಕೋಟಿ ವೆಚ್ಚದಲ್ಲಿ ಕಟ್ಟಲು ನಿರ್ಧರಿಸಲಾಗಿದೆ. ಇದಕ್ಕೆ ಗುರುವಾರ ಮುಜರಾಯಿ ಸಚಿವರು ಶಂಕಸ್ಥಾಪನೆ ನೆರವೇರಿಸಿದ್ದಾರೆ.
ತಿರುಚಾನೂರಿನ ಪದ್ಮಾವತಿ ಅಮ್ಮನವರ ದೇವಸ್ಥಾನದ ಪುಷ್ಕರಣಿಯ ಮುಂಭಾಗದಲ್ಲಿ ಕರ್ನಾಟಕ ಸರ್ಕಾರಕ್ಕೆ ಸೇರಿದ 600 ಚದರಡಿ ಜಮೀನಿದ್ದು, ಅದರಲ್ಲಿ ರು. 2.60 ಕೋಟಿ ವೆಚ್ಚದಲ್ಲಿ ನೂತನ ಕಲ್ಯಾಣ ಮಂಟಪ ನಿರ್ಮಿಸಲು 2011ರ ನ. 28ರಂದು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಶಂಕಸ್ಥಾಪನೆ ನೆರವೇರಿಸಿದ್ದರು. ಅದೀಗ ಪೂರ್ಣಗೊಂಡಿದ್ದು, ಅದನ್ನು ಕೂಡ ಗುರುವಾರ ಮುಜರಾಯಿ ಸಚಿವರು ಉದ್ಘಾಟಿಸಿದ್ದಾರೆ.