ಸ್ಪೀಕರ್ ಸರ್ಕಾರ ಉಳಿಸುತ್ತಾರೆ: ಕೋಟ
ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಸ್ಪೀಕರ್ ಬೋಪಯ್ಯ ಉಳಿಸುತ್ತಾರೆ. ಆದ್ದರಿಂದ ಸರ್ಕಾರದ ಬಹುಮತಕ್ಕೆ ಕೊರತೆಯಾಗುವುದಿಲ್ಲ. ವಿಧಾನಸಭಾ ಅಧಿವೇಶನ ನಡೆಯುತ್ತದೆ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಜೆಟ್ ಮಂಡಿಸುತ್ತಾರೆ ಎಂದು ಉಡುಪಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ಬೇಕಾದ ಶಾಸಕರ ಅಂಕಿ ಸಂಖ್ಯೆಗಳು ಸ್ಪೀಕರ್ ಅವರ ಚೇಂಬರ್‌ನಲ್ಲಿ ನಿರ್ಧಾರ ಆಗುತ್ತವೆ. ಇಂತಹ ಹತ್ತಾರು ಸಂದಿಗ್ಧ ಸಂದರ್ಭಗಳನ್ನು ಸ್ಪೀಕರ್ ಬೋಪಯ್ಯ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇದನ್ನು ಕೂಡ ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂದರು.
ಸ್ಪೀಕರ್ ನಡೆ ಪ್ರಶ್ನಿಸುವಂತಿಲ್ಲ: ರಾಜ್ಯದಲ್ಲಿದ್ದೂ ಬೋಪಯ್ಯ ಅವರು ಕೆಜೆಪಿ ಸೇರುವ 13 ಮಂದಿ ಶಾಸಕರ ರಾಜಿನಾಮೆ ಸ್ವೀಕರಿಸುವುದಕ್ಕೆ ತಮ್ಮ ಕಚೇರಿಗೆ ಬರುವುದು, ಬಾರದಿರುವುದು ಅವರಿಗೆ ಇರುವ ಅಧಿಕಾರ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಬೋಪಯ್ಯ ಅವರ ನಡೆಯನ್ನು ಸಮರ್ಥಿಸಿಕೊಂಡರು.
ಯಡಿಯೂರಪ್ಪ ಕಾರಣ ನೀಡಲಿ: ಸರ್ಕಾರ ಉರುಳಿಸಲು ಹೊರಟಿರುವ ಯಡಿಯೂರಪ್ಪ, ಇದಕ್ಕೆ ನೈಜ ಕಾರಣವನ್ನು ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈ ಹಿಂದೆ ಕೂಡ ಸರ್ಕಾರದ ಇಬ್ಬರು ಮುಖ್ಯಮಂತ್ರಿಯನ್ನು ಬದಲಾಯಿಸುವ ಸಂದರ್ಭಗಳು ರಾಜ್ಯದಲ್ಲಿ ಬಂದಿದ್ದವು. ಅದಕ್ಕೆ ಕಾರಣಗಳನ್ನು ಜನತೆಗೆ ಹೇಳಬೇಕಾಗಿಲ್ಲ, ಯಾಕೆಂದರೆ ಅದು ಬಿಜೆಪಿ ಆಂತರಿಕ ವಿಷಯ. ಆದರೆ ಈಗ ಯಡಿಯೂರಪ್ಪ ಅವರು ಬಿಜೆಪಿಯಲ್ಲಿಲ್ಲ, ಅವರು ವಿಪಕ್ಷದ ಸ್ಥಾನದಲ್ಲಿದ್ದಾರೆ. ಆದ್ದರಿಂದ ಅವರು ಸರ್ಕಾರವನ್ನು ಉರುಳಿಸುವುದಕ್ಕೆ ಕಾರಣಗಳನ್ನು ಜನತೆಗೆ ಹೇಳಬೇಕಾಗುತ್ತದೆ ಎಂದರು.