'ಏಜೆನ್ಸಿ ಹೆಚ್ಚಳದಿಂದ ಗ್ಯಾಸ್ ಸಂಪರ್ಕ ಸಮಸ್ಯೆ ಪರಿಹಾರ'
ಮಂಗಳೂರು: ಆರು ತಿಂಗಳ ಒಳಗೆ ಮಂಗಳೂರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಏಜೆನ್ಸಿಗಳನ್ನು ಆರಂಭಿಸಲಾಗುವುದು. ಈ ಮೂಲಕ ಗ್ರಾಹಕರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭಾರತ್ ಪೆಟ್ರೋಲಿಯಂ ಮಾರಾಟ ಅಧಿಕಾರಿ ವೇಣುಗೋಪಾಲ್ ಹೇಳಿದರು.
ಎಲ್ಪಿಸಿ ಗ್ಯಾಸ್ ಗ್ರಾಹಕರ ಸಮಸ್ಯೆ ಬಗ್ಗೆ ಪುರಭವನದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಗ್ಯಾಸ್ ಮತ್ತು ಪಡಿತರ ಕಾರ್ಡ್ ಬಳಕೆದಾರರ ಸಂಘ ಮತ್ತು ಪ್ರಜ್ಞಾ ವಿಕಾಸ ಸೇವಾ ಟ್ರಸ್ಟ್ ಕಾರ್ಯಕ್ರಮ ಆಯೋಜಿಸಿತ್ತು.
ಬಹುತೇಕ ದೂರುಗಳು ಗ್ಯಾಸ್ ಸಿಲಿಂಡರ್ ಸರಬರಾಜು ವಿಳಂಬದ ಬಗ್ಗೆ ಬಂದವು. ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ಪಡೆಯುತ್ತಾರೆ, ತೂಕದಲ್ಲಿ ಮೋಸ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂತು. ಹೆಚ್ಚಿನ ಏಜೆನ್ಸಿಗಳು ಕಾರ್ಯಾಚರಿಸಿದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದು ವೇಣುಗೋಪಾಲ್ ಅಭಿಪ್ರಾಯ ಪಟ್ಟರು.
ಕೆಲವು ಗ್ಯಾಸ್ ಎಜೆನ್ಸಿಗಳು ಹೊಸ ಕನೆಕ್ಷನ್ ಬೇಕಾದರೆ ಕುಕ್ಕರ್, ಸ್ಟವ್ ಖರೀದಿಸುವಂತೆ ಒತ್ತಡ ಹೇರುತ್ತವೆ. ಹೊಸ ಕನೆಕ್ಷನ್ಗೆ ಇದು ಅಗತ್ಯವೇ ಎಂದು ಗ್ರಾಹಕರೊಬ್ಬರು ಪ್ರಶ್ನಿಸಿದರು.
ಈ ಬಗ್ಗೆ ಉತ್ತರಿಸಿದ ಗ್ರಾಹಕ ವೇದಿಕೆ ವಕೀಲ ಶಶಿರಾಜ್ ಕಾವೂರು, ಅಂಥ ಬೇಡಿಕೆಗಳನ್ನು ತಿರಸ್ಕರಿಸಬಹುದು. ಏಜೆನ್ಸಿಗಳು ಈ ರೀತಿ ಮಾಡುವ ಬಗ್ಗೆ ಜನರು ಜಾಗೃತರಾಗಬೇಕು ಎಂದರು. ಜಿಲ್ಲಾ 'ಈ ರೀತಿ ಸೊತ್ತುಗಳನ್ನು ಖರೀದಿಸುವಂತೆ ಏಜೆನ್ಸಿಗಳು ಒತ್ತಡ ಹೇರಿದರೆ ಸಾರ್ವಜನಿಕರು ನಮಗೆ ದೂರು ನೀಡಿ' ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗ ಉಪನಿರ್ದೇಶಕ ಶರಣಬಸಪ್ಪ ಹೇಳಿದರು.
ತೂಕ ಪರಿಶೀಲಿಸಿ: ಗ್ಯಾಸ್ ಸಿಲಿಂಡರ್ ತೂಕ ಕಡಿಮೆ ಇರುತ್ತದೆ ಎಂದು ಎಕ್ಕೂರಿನ ವಿಶಾಲಾಕ್ಷಿ ಆರೋಪಿಸಿದರು. ಸಿಲಿಂಡರ್ ಪಡೆದುಕೊಳ್ಳುವಾಗ ತೂಕ ಪರಿಶೀಲಿಸಿ ಎಂದು ಅಧಿಕಾರಿ ವೇಣುಗೋಪಲ್ ಸಲಹೆ ಮಾಡಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ವಕೀಲ ಶಶಿರಾಜ್ ಕಾವೂರು, ಪ್ರತಿ ಗ್ರಾಹಕರು ಸಿಲಿಂಡರ್ ಪಡೆಯುವಾಗ ತೂಕ ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಗ್ಯಾಸ್ ಸಂಪರ್ಕ: ಬಾಡಿಗೆ ಮನೆಯಲ್ಲಿ ವಾಸ ಇರುವರು ಮನೆ ಬಿಟ್ಟಾಗ ಅವರ ಗ್ಯಾಸ್ ಸಂಪರ್ಕವನ್ನು ಮನೆ ಮಾಲೀಕರು ಪಡೆಯಬೇಕು. ಹೊಸಬರಿಗೆ ಬಂದಾಗ ಅದನ್ನು ನೀಡಬೇಕಾಗುತ್ತದೆ, ಇಲ್ಲವಾದರೆ ಹೊಸಬರಿಗೆ ಗ್ಯಾಸ್ ಸಂಪರ್ಕ ಲಭಿಸುವುದಿಲ್ಲ ಎಂದು ಶರಣಬಸಪ್ಪ ಹೇಳಿದರು.
ಬೇಡಿಕೆ: ವಾರ್ಷಿಕ 12 ಸಿಲಿಂಡರ್ ವಿತರಿಸಬೇಕು, 3 ತಿಂಗಳಿಗೆ ಒಮ್ಮೆ ಗ್ಯಾಸ್ ಅದಾಲತ್ ನಡೆಸಬೇಕು ಎಂಬಿತ್ಯಾದಿ 14 ಬೇಡಿಕೆಯನ್ನು ಕೇಂದ್ರ ಇಂಧನ ಸಚಿವರಿಗೆ ಇಮೇಲ್ ಮೂಲಕ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷ ದಾಮೋದರ ಕೆ. ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ.ಹರೀಶ್ ರೈ ಇದ್ದರು.
ಅಧಿಕಾರಿಗಳು ಗೈರು
ಈ ಜನಸಂಪರ್ಕ ಸಭೆಗೆ ಎಲ್ಲ ತೈಲ ಕಂಪನೆಗಳು ಮಾರಾಟ ಅಧಿಕಾರಿಗಳನ್ನು ಹಾಜರಾಗುವಂತೆ ಕೇಳಲಾಗಿತ್ತು. ಕೇವಲ ಭಾರತ್ ಪೆಟ್ರೋಲಿಯಂ ತೈಲ ಸಂಸ್ಥೆಯ ಅಧಿಕಾರಿ ಇದ್ದರು. ತೈಲ ಸಂಸ್ಥೆ ಅಧಿಕಾರಿಗಳ ಗೈರು ಹಾಜರಿಯನ್ನು ಶಾಸಕ ಯು.ಟಿ.ಖಾದರ್ ಖಂಡಿಸಿದರು. ಅಧಿಕಾರಿಗಳು ಜನಸಂಪರ್ಕ ಸಭೆಗೆ ಹಾಜರಾಗಲೇ ಬೇಕು. ಗ್ರಾಹಕ ವೇದಿಕೆ ಕೇಂದ್ರ ಇಂಧನ ಸಚಿವವ ಎಂ.ವೀರಪ್ಪ ಮೊಯ್ಲಿ ಅವರಿಗೆ ದೂರು ನೀಡಬೇಕು. ಅಲ್ಲಿಂದ ಕಾರಣ ಕೇಳಿ ನೋಟಿಸ್ ಬಂದರೆ ಇವರಿಗೆ ಬುದ್ಧಿ ಬರುತ್ತದೆ ಎಂದು ಟೀಕಿಸಿದರು. ಹಳ್ಳಿಗಳಲ್ಲಿ 3 ತಿಂಗಳಿಗೆ ಒಮ್ಮೆ ಗ್ಯಾಸ್ ಆದಾಲತ್ ನಡೆಸಬೇಕು ಎಂದು ಸೂಚಿಸಿದರು.