ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಂಗಕಲೆಗಳ ಉಳಿವು ದುಸ್ತರ: ಕಾಸರಗೋಡು ಚಿನ್ನಾ ವಿಷಾದ

Lingaraj Badiger
Updated On : 29 Jan 2013, 12:00 pm

ಉಡುಪಿ: ಆಧುನಿಕ ಜಗತ್ತಿನ ಸೆಳೆತದ ಗೊಂದಲಮಯ ಸ್ಥಿತಿಯಲ್ಲಿ ಪರಂಪರಾಗತ ಭಾರತೀಯ ರಂಗ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ದುಸ್ತರವಾಗುತ್ತಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಸರಗೋಡು ಚಿನ್ನಾ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಪಡುಬೆಳ್ಳೆ ಶ್ರೀನಾರಾಯಣಗುರು ಶಿಕ್ಷಣ ಸಂಸ್ಥೆಗಳ ವಠಾರದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಅಸ್ತಿತ್ವಕ್ಕೆ ಬಂದ ವೇದಿಕೆ 'ಪರಿಚಯ ಪಾಂಬೂರು' ಇದರ ವರ್ಷಧ್ವನಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಂಸ್ಥೆಯ ಗೌರವಾಧ್ಯಕ್ಷ ಪ್ರೊ. ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಬಿ. ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ ಸ್ವಾಗತಿಸಿದರು. ಸರಿತಾ ಆಳ್ವಾ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ನೊರೊನ್ನಾ ವಂದಿಸಿದರು.
ಈ ಸಮಾರಂಭದ ಅಂಗವಾಗಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಡುಬೆಳ್ಳೆ, ದ್ವಿತೀಯ ಸ್ಥಾನ ಗಳಿಸಿದ ಬೆಳ್ಮಣ್‌ನ ಸಂತ ಜೋಸೆಫ್ ಪ್ರೌಢ ಶಾಲೆ ವಿದ್ಯಾರ್ಥಿ ತಂಡಕ್ಕೆ ನಗದು ಬಹುಮಾನ ವಿತರಿಸಲಾಯಿತು. ಅಂತಾರಾಷ್ಟ್ರೀಯ ಮಾಜಿ ಕ್ರೀಡಾಪಟು ವಂದನಾ ಶಾನುಭಾಗ್ ಅವರನ್ನು ಗೌರವಿಸಲಾಯಿತು. ನಂತರ ಅಂತಾರಾಷ್ಟ್ರೀಯ ಖ್ಯಾತ ಕಲಾವಿದ, ಸಿತಾರ್ ವಾದಕ ಸುರಮಣಿ ಉಸ್ತಾದ್ ರಫಿಕ್ ಖಾನ್ ಮತ್ತು ಕೊಳಲು ವಾದಕ ಸುರಮಣಿ ಪ್ರವೀಣ್ ಗೋಡ್ಖಿಂಡಿ ಅವರ ಸಿತಾರ್- ಕೊಳಲು ಜುಗಲ್‌ಬಂದಿ ಹಾಗೂ ವಿಶ್ವ ಖ್ಯಾತಿಯ ಕೇರಳದ 'ಶಿವಾಸ್ ಫ್ಯೂಶನ್ ಬ್ಯಾಂಡ್‌' ಇವರ ಸಂಗೀತ ಕಾರ್ಯಕ್ರಮ ನಡೆಯಿತು.
ಇತ್ತೀಚೆಗೆ ನಿಧನರಾದ ವಿಶ್ವವಿಖ್ಯಾತ ಸಿತಾರ್ ಮಾಂತ್ರಿಕ ರವಿಶಂಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸುವ ಮೂಲಕ ಉಸ್ತಾದ್ ರಫೀಕ್ ಖಾನ್, ಪ್ರವೀಣ್ ಗೋಡ್ಖಿಂಡಿ ಅವರು ಅಗಲಿದ ಹಿರಿಯ ಕಲಾವಿದರಿಗೆ ಸ್ಮರಣಾಂಜಲಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement