ಇಬ್ಬರು ಮಹಿಳೆಯರ ಚಿನ್ನಾಭರಣ ಅಪಹರಣ
ಕುಂದಾಪುರ: ಇಲ್ಲಿನ ಚಿಕ್ಕಮ್ಮ ದೇವಿಯ ದೇವಸ್ಥಾನದಲ್ಲಿ ಇಬ್ಬರು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿದ ಘಟನೆ ಸೋಮವಾರ ರಾತ್ರಿನಡೆದಿದೆ. ಇಲ್ಲಿನ ಕಸಬಾ ಮಾರುಕಟ್ಟೆಯ ರಸ್ತೆಯ ಮಾಣಿಮನೆ ಎಂಬಲ್ಲಿನ ನಿವಾಸಿ ಸುಶೀಲ (32) ಎಂಬವರು ಸ್ಥಳೀಯ ಚಿಕ್ಕಮ್ಮ ದೇವಿಯ ಜಾತ್ರೆಗೆ ಹೋಗಿದ್ದು, ದೇವಸ್ಥಾನದ ಒಳಗಡೆ ಹೋಗುವಾಗ ಯಾರೋ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದಂತಾಯಿತು. ಪರೀಕ್ಷಿಸಿ ನೋಡಿದಾಗ ಕುತ್ತಿಗೆಯಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಸರ ಇರಲಿಲ್ಲ. ಅವರೊಂದಿಗೆ ಬಂದಿದ್ದ ನೆರೆಮನೆಯ ಗೌರಮ್ಮ ಎಂಬವರ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ 2 ಎಳೆಯ ಕರಿಮಣಿ ಸರವನ್ನು ಕೂಡ ಕಳ್ಳರು ಸೆಳೆದುಕೊಂಡು ಹೋಗಿದ್ದಾರೆ. ಈ ಎರಡೂ ಸರಗಳ ಒಟ್ಟು ಮೌಲ್ಯ ರು. 1.24 ಲಕ್ಷ ಎಂಬುದಾಗಿ ಸುಶೀಲ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ನಿಟ್ಟೆ ಗ್ರಾಮದ ದಡ್ಡುಕಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರು ರಾಜು ಮೇಸ್ತ್ರಿ (65). ತಮಗಿರುವ ರಟ್ಟೆ ನೋವಿನಿಂದಾಗಿ ಕೆಲಸ ಮಾಡಲಿಕ್ಕಾಗದೆ ಕುಡಿತ ಚಟ ಹೆಚ್ಚಿಸಿಕೊಂಡಿದ್ದರು. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ರಾತ್ರಿ ಮನೆ ಬಳಿಯ ಪಾದೆಯಲ್ಲಿ ಯಾವುದೋ ವಿಷ ಪದಾರ್ಥವನ್ನು ಶರಾಬಿನೊಂದಿಗೆ ಬೆರೆಸಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಮಗ ಸಂತೋಷ ಪೂಜಾರಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿ ಆಕಸ್ಮಿಕ: ಗಾಯಾಳು ಸಾವು
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಬೆಳಂದೂರು ಎಂಬಲ್ಲಿ ಅಗ್ನಿ ಆಕಸ್ಮಿಕಕ್ಕೆ ಸಿಲುಕಿ ಗಂಭೀರ ಗಾಯಗೊಂಡ ಹತ್ತು ವರ್ಷದ ಬಾಲಕ ಅಬ್ದುಲ್ ರಫೀಕ್ ಎಂಬಾತ ಮಂಗಳವಾರ ಮೃತಪಟ್ಟ ಘಟನೆ ಸಂಭವಿಸಿದೆ. ಬೆಳಂದೂರು ನಿವಾಸಿ ಐಸಮ್ಮ ಎಂಬವರ ಪುತ್ರ ಅಬ್ದುಲ್ ರಫೀಕ್ ಮೃತ. ಈತ ಐದನೇ ತರಗತಿ ವಿದ್ಯಾರ್ಥಿಯಾಗಿದ್ದು, ಜ. 27 ರಂದು ಮನೆ ಸಮೀಪದ ತರಗೆಲೆಗಳನ್ನು ಒಟ್ಟು ರಾಶಿ ಹಾಕಿ ಬೆಂಕಿ ಹಚ್ಚುವಾಗ, ಆಕಸ್ಮಿಕವಾಗಿ ಬೆಂಕಿ ಈತನ ಮೈ ಮೇಲಿದ್ದ ಬಟ್ಟೆಗೆ ತಗಲಿ, ಸುಟ್ಟ ಗಾಯ ಹೊಂದಿದ್ದ. ಕೂಡಲೇ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತ ಪಟ್ಟನೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೈಪ್‌ಲೈನ್ ವಿವಾದ; ಪ್ರಕರಣ ದಾಖಲು
ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆಯ ಉಳ್ಳೆಪ್ಪಾಡಿಯ ಸಂಕಪ್ಪ ನಾಯ್ಕೆಗೆ ಸಂಬಂಧಿಸಿದ 46.36 ಎಕ್ರೆ ಜಾಗವನ್ನು ಮನೋಜ್ ಕೃಷ್ಣನ್ ಎಂಬವರು ಖರೀದಿಸಿದ್ದು ಜಾಗಕ್ಕೆ ನೀರು ಹಾದು ಹೋಗಲು ಸುನಂದ ಅವರ ಜಾಗದಲ್ಲಿ ಪೈಪ್ ಲೈನ್ ಹಾಕಿದ್ದರು. ಸದ್ರಿ ಸರ್ವೆ ನಂಬರ್‌ಗೆ ಸೇರಿದ ತಿಮ್ಮಪ್ಪ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಮತ್ತಿರರರು ನಮ್ಮ ಜಾಗದಲ್ಲಿ ನೀರಿನ ಪೈಪ್ ಹಾದುಹೋಗಬೇಕಾದರೆ 3 ಲಕ್ಷ ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪದ್ದಕ್ಕೆ ತಿಮ್ಮಪ್ಪ ಶೆಟ್ಟಿ, ಚಿತ್ತರಂಜನ್ ಶೆಟ್ಟಿ ಮತ್ತಿರರರು ದಿವಾಕರ ಚೌಟರಿಗೆ ಸೇರಿದ ಜಾಗದಲ್ಲಿ ಮನೋಜ್ ಕೃಷ್ಣನ್ ಎಂಬವರ ಜಾಗಕ್ಕೆ ಹಾದು ಹೋಗಿರುವ ಪೈಪ್ ಲೈನ್ ಅನ್ನು ಸೋಮವಾರ ರಾತ್ರಿ ಕಿತ್ತು ಹಾಕಿದ್ದು, ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.