ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಂಬಳಕ್ಕೆ ರು. 21 ಲಕ್ಷ ಅನುದಾನ

Lingaraj Badiger
Updated On : 31 Jan 2013, 11:13 am

ಉಡುಪಿ: ಜಿಲ್ಲೆಯಲ್ಲಿ ಕಂಬಳ ನಡೆಸುವುದಕ್ಕೆ ಸರ್ಕಾರ ಜಿಲ್ಲಾಡಳಿತಕ್ಕೆ ರು. 21 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಈ ಸಂಬಂಧ ಕ್ರಿಯಾಯೋಜನೆ ರೂಪಿಸಲಾಗುವುದು ಉಡುಪಿ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಜಿಲ್ಲೆಯ ಕಂಬಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಕಂಬಳಕ್ಕೆ ರು. ಒಂದು ಲಕ್ಷದಂತೆ ಹಾಗೂ ಅಲ್ಲಿ ಕಂಬಳ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ರಸ್ತೆಗೆ ರು. 2 ಲಕ್ಷದಂತೆ ತಲಾ ರು. 3 ಲಕ್ಷ ಬಿಡುಗಡೆ ಮಾಡಲಾಗಿದೆ. ಕಂಬಳದ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ದ.ಕ ಮತ್ತು ಉಡುಪಿ ಜಿಲ್ಲೆಗೆ ರು. 10 ಲಕ್ಷ  ಬಿಡುಗಡೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಎಂ. ಜುಂಜಣ್ಣ, ಕಂಬಳ ಸಮಿತಿಯ ಪ್ರದಾನ ಕಾರ್ಯದರ್ಶಿ ಪ್ರೊ.ಕೆ. ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳುವಾಯಿ ಸದಾನಂದ ಶೆಟ್ಟಿ ಹಾಗೂ ಸಮಿತಿ ಸದಸ್ಯರು ಇದ್ದರು.

ಕೊಳಚೆ ನೀರು ಹರಿಸದಿರಲು ಸೂಚನೆ
ಹೆಬ್ರಿ: ಹೆಬ್ರಿ ಪೇಟೆಯ ಆಗುಂಬೆ ರಸ್ತೆ ಮತ್ತು ಬಸ್ ನಿಲ್ದಾಣ ಸೇರಿ ಹಲವೆಡೆ ಹೊಟೇಲ್‌ಗಳ ಕೊಳಚೆ ನೀರು ರಸ್ತೆಯಂಚಿನಲ್ಲಿ ಹರಿದು ದುರ್ವಾಸನೆ ಬೀರುತ್ತಿದ್ದು, ಈ ಹಿನ್ನೆಲೆಯಲ್ಲಿ ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಸುಮಾ ಎನ್. ಅಡ್ಯಂತಾಯ ಮತ್ತವರ ತಂಡ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಳಚೆ ನೀರು ಹರಿಯದಂತೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪೇಟೆಯಲ್ಲಿ ಮತ್ತು ಹೆಬ್ರಿಯ ಮಾರುಕಟ್ಟೆಯ ರಸ್ತೆ ಬದಿ ವ್ಯಾಪಾರಿಗಳಿಗೆ ಮಾರ್ಕೆಟ್‌ನಲ್ಲೇ ಮಾರಾಟ ಮಾಡುವಂತೆ ಸೂಚಿಸಿದರು. ಹೆಬ್ರಿ ಪಂಚಾಯಿತಿ ಉಪಾಧ್ಯಕ್ಷೆ ಬೇಬಿ, ಕಾರ್ಯದರ್ಶಿ ಶೇಖರ ಪೂಜಾರಿ, ಸದಸ್ಯರಾದ ಶಶಿಕಲಾ ಆರ್.ಪಿ., ಲೀಲಾವತಿ ರಾಜೇಶ ಆಚಾರ್ಯ, ಸುರೇಖ ಭಾಸ್ಕರ ಶೆಟ್ಟಿ, ಪಕ್ಷದ ಕಾರ್ಯದರ್ಶಿ ನವೀನ್ ಅಡ್ಯಂತಾಯ, ಪ್ರಮುಖರಾದ ಜನಾರ್ದನ್ ಹೆಬ್ರಿ, ಗಾಯತ್ರಿ ಆಚಾರ್ಯ ಇದ್ದರು.

ಚುನಾವಣಾ ಆಯೋಗ ಸಂಸ್ಥಾಪನಾ ದಿನ
ಉಡುಪಿ: ಭಾರತ ಚುನಾವಣಾ ಆಯೋಗ ಮತದಾರರಿಗೆ ನೀಡುವ ಗುರುತಿನ ಕಾರ್ಡನ್ನು ಬ್ಯಾಂಕ್ ಖಾತೆ ತೆರೆಯಲು ಅಥವಾ ಇನ್ನಿತರ ದೃಢೀಕರಣಕ್ಕೆ ಸಾರ್ವಜನಿಕರು ಬಳಸುತ್ತಿದ್ದಾರೆ. ಆದರೆ, ಚುನಾವಣೆಗಳು ಬಂದಾಗ ಮತದಾನ ಮಾಡದೆ ವಿಮುಖರಾಗುತ್ತಿದ್ದಾರೆ ಎಂದು ಅಲೆವೂರು ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಕಿಣಿ ವಿನಂತಿಸಿದರು. ಅವರು ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನದಂದು ಅಲೆವೂರು ಗ್ರಾ.ಪಂ. ವ್ಯಾಪ್ತಿಯ ನೂತನ ಮತದಾರರಿಗೆ ಮತದಾರ ಗುರುತಿನ ಕಾರ್ಡ್ ವಿತರಿಸಿ ಮಾತನಾಡಿದರು.  ಸಮೀಕ್ಷೆಯೊಂದರ ಪ್ರಕಾರ ಶೇ. 50ಕ್ಕಿಂತಲೂ ಹೆಚ್ಚಿನ ಯುವಜನತೆ ಮತದಾನಕ್ಕೆ ಗೈರಾಗುತ್ತಿದ್ದಾರೆ.  ಆದ್ದರಿಂದ ಪ್ರಜ್ಞಾವಂತ ಮತದಾರರು ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ಗುರುತಿನ ಕಾರ್ಡ್‌ನೊಂದಿಗೆ ಆಗಮಿಸಿ ಮತದಾನ ಮಾಡಬೇಕು ಎಂದರು ಗ್ರಾ.ಪಂ. ಸದಸ್ಯರಾದ ಜಲಜಾ ಸೂರಪ್ಪ ಪೂಜಾರಿ, ಬೇಬಿ ರಾಜೇಶ್, ಬಿ.ಎಲ್.ಓ. ಸತೀಶ್ ಮತ್ತು ಯಶೋಧಾ ಇದ್ದರು.

ಬಿಎಸ್‌ಡಬ್ಲ್ಯು ವಿದ್ಯಾರ್ಥಿಗಳ ಪ್ರವಾಸ
ಉಡುಪಿ: ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್‌ಡಬ್ಲ್ಯು ವಿದ್ಯಾರ್ಥಿಗಳು ಉ.ಕ. ಮುಂಡಗೋಡಕ್ಕೆ ಇತ್ತೀಚೆಗೆ 2 ದಿನಗಳ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರು. ಮುಂಡಗೋಡಿನ ಲಂಬಾಣಿ ಬುಡಕಟ್ಟು ಜನಾಂಗದೊಂದಿಗೆ ಎರಡು ದಿನ ವಾಸ್ತವ್ಯವಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement