ಕುಮ್ಕಿ ಜಮೀನು ಮಂಜೂರು: ದಲಿತ ಸಂಘರ್ಷ ಸಮಿತಿ ತೀವ್ರ ವಿರೋಧ
ಉಡುಪಿ: ರೈತರ ಕೃಷಿ ಭೂಮಿಗೆ ತಾಗಿಕೊಂಡಿರುವ ಸರ್ಕಾರಿ (ಕುಮ್ಕಿ) ಭೂಮಿಯನ್ನು ರೈತರಿಗೆ ಮಂಜೂರು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತೀವ್ರವಾಗಿ ವಿರೋಧಿಸಿದೆ.
ಸಮಿತಿಯ ರಾಜ್ಯ ಸಮಿತಿ ಸದಸ್ಯ ಸುಂದರ ಮಾಸ್ತರ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಈ ನಿರ್ಧಾರ ಮುಂಬರುವ ಚುನಾವಣೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮಾಡಲಾಗಿದೆ.
ಈ ನಿರ್ಧಾರದಿಂದ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹತ್ತಾರು ಎಕರೆಗೂ ಹೆಚ್ಚು ಭೂಮಿ ಹೊಂದಿರುವ ಸಾವಿರಾರು ಮಂದಿ ಶ್ರೀಮಂತ ರೈತರಿಗೆ ಇನ್ನಷ್ಟು ಭೂಮಿ ಉಚಿತವಾಗಿ ನೀಡಿದಂತಾಗುತ್ತದೆಯೇ ಹೊರತು, ಲಕ್ಷಾಂತರ ಮಂದಿ ಸಣ್ಣ ಹಿಡುವಳಿ ಹೊಂದಿರುವ ರೈತರಿಗೆ, ಬಡವರಿಗೆ, ಭೂರಹಿತ ದಲಿತ, ಹಿಂದಳಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ತನ್ನ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿ ಕುಳಿತವರಿಗೆ ಸರ್ಕಾರ 5- 10 ಸೆಂಟ್ಸ್ ಭೂಮಿ ನೀಡದೆ ಸತಾಯಿಸುತ್ತಿದೆ. ಆದರೆ ಹತ್ತಾರು ಎಕ್ರೆ ಭೂಮಿ ಇರುವ ಭೂ ಮಾಲಕರಿಗೆ ಈ ರೀತಿ ಪುಕ್ಕಟೆಯಾಗಿ ಭೂಮಿ ನೀಡುವ ನಿರ್ಧಾರ ಕೈಗೊಂಡಿರುವುದು, ಇದನ್ನು ವಿರೋಧಪಕ್ಷಗಳು ಕೂಡ ವಿರೋಧಿಸದೆ ಇರುವುದು, ಅವರು ಕೂಡ ಉಳ್ಳವರ, ಬಂಡವಾಳ ಶಾಹಿಗಳ, ಭೂಮಾಫಿಯಾದ ಜೊತೆಗೆ ಶಾಮೀಲಾಗಿರುವ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ ಎಂದವರು ಆರೋಪಿಸಿದರು.
ರಾಜ್ಯಪಾಲರು ಸಹಿ ಹಾಕಬಾರದು: ಕುಮ್ಕಿ ಭೂಮಿ ಎಂದರೆ ಬರಡು ಭೂಮಿಯಲ್ಲ, ಅದರಲ್ಲಿ ಅರಣ್ಯ ಪ್ರದೇಶ ಕೂಡ ಇದೆ. ಸರ್ಕಾರದ ನಿರ್ಧಾರದಿಂದ ಈ ಸಾವಿರಾರು ಎಕ್ರೆ ಅರಣ್ಯ ಕೂಡ ನಾಶವಾಗಲಿದೆ. ಆದ್ದರಿಂದ ರಾಜ್ಯಪಾಲರು ರಾಜ್ಯ ಸರ್ಕಾರದ ಕುಮ್ಕಿ ಹಕ್ಕು ಮಂಜೂರು ವಿಧೇಯಕಕ್ಕೆ ಸಹಿ ಹಾಕಬಾರದು ಎಂದು ಸುಂದರ ಮಾಸ್ತರ್ ಆಗ್ರಹಿಸಿದರು. ಅಲ್ಲದೆ, ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ ಬಡವರಿಗೆ, ದಲಿತರಿಗೆ ಭೂಮಿಯನ್ನು ಸಕ್ರಮಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಹೂವಪ್ಪ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ ಬಿರ್ತಿ, ತಾಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು ಇದ್ದರು.