ಪೊಡವಿಗೊಡೆಯನ ನಾಡಿಗೂ ತಪ್ಪದ ಜಲಬಾಧೆ
-ಸುಭಾಶ್ಚಂದ್ರ ಎಸ್. ವಾಗ್ಳೆ
ಉಡುಪಿ: ಒಂದು ಪಕ್ಕದಲ್ಲಿ ಸಮುದ್ರ, ಇನ್ನೊಂದು ಪಕ್ಕದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಪಶ್ಚಿಮಘಟ್ಟವಿರುವ ಉಡುಪಿಯಲ್ಲಿ ಕಳೆದ ವರ್ಷ ಕುಡಿಯುವ ನೀರಿನ ಹಾಹಾಕಾರ ಉಂಟಾಗಿತ್ತು, ದಿನದ 24 ಗಂಟೆಯೂ ನೀರು ಪೂರೈಸುವ ರಾಜ್ಯದ ಏಕೈಕ ನಗರಸಭೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದ ಉಡುಪಿ 2 ದಿನಕ್ಕೆ ಒಮ್ಮೆ, ಅದೂ ಒಂದೆರಡು ಗಂಟೆಗಳ ಕಾಲ ನೀರು ಪೂರೈಕೆ ಮಾಡುವುದಕ್ಕೆ ಹರಸಾಹಸಪಟ್ಟಿತ್ತು.
ಇದಕ್ಕೆ ನಗರಸಭೆ ನೀಡಿದ ಕಾರಣ, ನಗರಕ್ಕೆ ನೀರು ಪೂರೈಕೆ ಮಾಡುವ ಸುವರ್ಣನದಿಯಲ್ಲಿ ಹೂಳು ತುಂಬಿರುವುದು, ಹೂಳಿನಿಂದಾಗಿ ಬಜೆ ಎಂಬಲ್ಲಿರುವ ನೀರೆತ್ತುವ ಅಣೆಕಟ್ಟೆಯಲ್ಲಿ ಆಗಬೇಕಾದಷ್ಟು ನೀರು ಸಂಗ್ರಹವಾಗುತ್ತಿಲ್ಲ, ಆದ್ದರಿಂದ ನೀರಿನ ಕೊರತೆ ಉಂಟಾಗಿದೆ.
ಈಗಲೂ ಹೂಳು ತೆಗೆದಿಲ್ಲ: ಇದು ಕಳೆದ ವರ್ಷದ ಕತೆಯಾಯಿತು, ಈ ವರ್ಷ ಮಳೆಗಾಲ ಮುಗಿದು ಅದಾಗಲೇ 3 ತಿಂಗಳು ಕಳೆದಿವೆ. ಬೇಸಿಗೆಗಾಲವೂ ಕಾಲಿಟ್ಟಿದೆ. ಕಳೆದ ವರ್ಷದ ಸಮಸ್ಯೆ ಈ ವರ್ಷವೂ ತಲೆದೊರಲಿದೆ, ಯಾಕೆಂದರೆ ಸುವರ್ಣ ನದಿಯಲ್ಲಿ ತುಂಬಿರುವ ಹೂಳು ಎತ್ತುವ ಕೆಲಸ ಆಗಿಲ್ಲ, ಸಹಜವಾಗಿಯೇ ನೀರಿನ ಸಂಗ್ರಹ ಕಡಿಮೆಯಾಗಲಿವೆ, ನೀರಿನ ಕೊರತೆಯಾಗಲಿದೆ.
ನದಿಯಲ್ಲಿ ತುಂಬಿರುವ ಹೂಳನ್ನು ಎತ್ತಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಿಸಲಾಗುವುದು ಎಂದು ನಗರಸಭೆಯ ಅಧ್ಯಕ್ಷರು ಹೇಳುತ್ತಿದ್ದರಾದರೂ, ಹೈಕೋರ್ಟ್‌ನ ಆದೇಶದಿಂದ ಅದಕ್ಕೆ ತೊಡಕುಂಟಾಗಿದೆ. ಈ ಆದೇಶದ ಪ್ರಕಾರ ನದಿಗಳಲ್ಲಿ ಯಂತ್ರಗಳ ಮೂಲಕ ಹೂಳೆತ್ತುವುದಕ್ಕೆ ಅವಕಾಶ ಇಲ್ಲ, ಆದರೆ ಸುವರ್ಣ ನದಿಯಲ್ಲಿ ತುಂಬಿರುವ ಭಾರೀ ಪ್ರಮಾಣದ ಹೂಳನ್ನು ಯಂತ್ರಗಳಿಂದಲ್ಲದೇ ಮನುಷ್ಯನಿಂದ ಎತ್ತುವುದಕ್ಕೆ ಸಾಧ್ಯವಿಲ್ಲ.
ಆದರೂ ನಗರಸಭೆ, ಕೈಲಾದದ್ದನ್ನು ಮಾಡುತ್ತಿದೆ, ಕೈಯಿಂದ ಹೂಳನ್ನು ಎತ್ತುವುದಕ್ಕೆ ಕೆಲವು ಮಂದಿಯನ್ನು ನಿಯೋಜಿಸಿದೆ. ಆದರೆ ಅದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗುತ್ತಿದೆ.
ಯಂತ್ರ ಬಳಕೆಗೆ ಒಪ್ಪಿಗೆಯಿಲ್ಲ: ಸ್ವತಃ ನಗರಸಭೆಯ ಅಧ್ಯಕ್ಷ ಕಿರಣ್ ಕುಮಾರ್, ಬಜೆ ಅಣೆಕಟ್ಟೆಯ ಜಲಾಶಯ ಪ್ರದೇಶದ ಅರ್ಧದಷ್ಟು ಬರೇ ಹೂಳು ತುಂಬಿಕೊಂಡಿದೆ, ಅದನ್ನು ಯಂತ್ರಗಳ ಮೂಲಕ ಎತ್ತುವುದಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಮನವೊಲಿಸುವ ಪ್ರಯತ್ನ ಮಾಡಲಾಗಿದೆ, ಅದರೂ ಜಿಲ್ಲಾಧಿಕಾರಿ ಒಪ್ಪಿಲ್ಲ. ಇದನ್ನು ಮಾನವ ದುಡಿಮೆಯ ಮೂಲಕ ಎತ್ತುವುದಂತೂ ಸಾಧ್ಯವೇ ಇಲ್ಲ ಎಂಬ ವಾಸ್ತವ ಒಪ್ಪಿಕೊಳ್ಳುತ್ತಿದ್ದಾರೆ.
ಸದ್ಯಕ್ಕಂತೂ ಜಲಾಶಯಕ್ಕೆ ಮೇಲುಭಾಗದಿಂದ ನೀರಿನ ಒಳಹರಿವು ಇದೆ, ಆದ್ದರಿಂದ ಜಲಾಶಯ ತುಂಬಿದ್ದು, ಹೆಚ್ಚುವರಿ ನೀರು ಅಣೆಕಟ್ಟೆಯಿಂದ ಹೊರಗೆ ಹೋಗುತ್ತಿದೆ. ಆದರೆ ಇದು ಇನ್ನು ಒಂದೆರಡು ವಾರವಷ್ಟೇ ಇದ್ದೀತು. ನಂತರ ಜಲಾಶಯದಲ್ಲಿ ಹೂಳುಸಹಿತ ತುಂಬಿರುವ ನೀರಷ್ಟೇ ಉಡುಪಿಗೆ ಲಭ್ಯವಾಗಲಿದೆ. ಆಂದರೆ ಉಡುಪಿ ನಗರದ ಜನತೆಗ ನೀರಿನ ಕೊರತೆ ಖಚಿತ.
ನಗರಸಭೆಯಲ್ಲಿ ಈಗಿರುವ ಆಡಳಿತ ಮಂಡಳಿಯ ಅಧಿಕಾರ ಇನ್ನೊಂದು ತಿಂಗಳಲ್ಲಿ ಕೊನೆಗೊಳ್ಳುತ್ತದೆ, ಮತ್ತೆ ಚುನಾವಣೆ ನಡೆದು ಹೊಸ ಮಂಡಳಿ ಅಧಿಕಾರಕ್ಕೆ ಬರುತ್ತಿದ್ದಂತೆ ಅದಕ್ಕೆ ಈ ಕುಡಿಯುವ ನೀರಿನ ಪೂರೈಕೆಯ ಭಾರೀ ತಲೆ ನೋವು ಎದುರಾಗಲಿದೆ.
ಸಮಸ್ಯೆಗೆ ಪರಿಹಾರ ಎಂದರೇ ಒಂದೋ ಹೈಕೋರ್ಟ್ ಆದೇಶ ಹಿಂದಕ್ಕೆ ಪಡೆಯುವಂತೆ ಮಾಡಬೇಕು, ಯಾಂತ್ರೀಕೃತ ಹೂಳೆತ್ತಬೇಕು, ನದಿಯಲ್ಲಿರುವ ಸಾವಿರಾರು ಜಲಜೀವಿಗಳನ್ನು ಬಲಿಕೊಡಬೇಕು, ಇಲ್ಲವೇ ಉಡುಪಿ ನಗರದ ಜನತೆ ಈ ಬಾರಿಯೂ ಒಂದೆರಡು ತಿಂಗಳಂತೂ ಕುಡಿಯುವ ನೀರಿನ ಕೊರತೆ ಅನುಭವಿಸಲೇಬೇಕು, ಕಷ್ಟ ಸಹಿಸಿಕೊಳ್ಳಲೇಬೇಕು, ಇದು ಈ ಒಂದು ವರ್ಷ ಅಲ್ಲ, ಮುಂದಿನ ವರ್ಷಗಳಲ್ಲಿಯೂ ಸಹಿಸಿಕೊಳ್ಳಬೇಕು.
ಕೋರ್ಟ್ ಆದೇಶವೇನು?
ಯಾಂತ್ರೀಕೃತ ಹೂಳೆತ್ತುವ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಹೈಕೋರ್ಟ್, ಯಂತ್ರಗಳಿಂದ ಹೂಳೆತ್ತುವಾಗ ನದಿಯ ನೀರಿನಲ್ಲಿ ಮತ್ತು ನದಿಯ ಹೂಳು, ಮರಳಿನಲ್ಲಿ ವಾಸಿಸುವ ಮೀನು ಸಂಕುಲ, ಸಾವಿರಾರು ಪ್ರಭೇದದ ಸಸ್ಯ ಮತ್ತು ಜಲಜೀವಿಗಳಿಗೆ ಸಾರಾಸಗಟಾಗಿ ತೊಂದರೆಯಾಗುತ್ತದೆ, ನದಿಯಲ್ಲಿನ ಜೈವಿಕ ವ್ಯವಸ್ಥೆಯೇ ನಾಶವಾಗುತ್ತವೆ. ಆದ್ದರಿಂದ ನದಿಯಲ್ಲಿ ಹೂಳೆತ್ತುವುದಕ್ಕೆ ಯಂತ್ರಗಳನ್ನು ಬಳಸಲೇಬಾರದು ಎಂದು ಕಡ್ಡಾಯವಾಗಿ ಹೇಳಿದೆ.