ಲೋಕಾಯುಕ್ತ ಬಲೆಗೆ ಸೂಡಾ ಗ್ರಾಮ ಲೆಕ್ಕಿಗ
ಕಾರ್ಕಳ: ಜಮೀನಿನ ನಕ್ಷೆ ಮಾಡಿಕೊಡುವುದಕ್ಕೆ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗರೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. ಕಾರ್ಕಳ ತಾಲೂಕಿನ ಸೂಡಾ ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಿಗ ಕೇಶವ ಮೊಯ್ಲಿ ತನ್ನ ಲಂಚಕೋರತನಕ್ಕಾಗಿ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದವರು. ಇಲ್ಲಿನ ನಿವಾಸಿ ಶಿರಾಜುದ್ದಿನ್ ಎಂಬವರು ತಮ್ಮ ಸಂಬಂಧಿಕರಿಗೆ ಸೇರಿದ್ದ ಜಮೀನಿನ ನಕ್ಷೆಗಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಕೇಶವ ಲಂಚ ಕೇಳಿದ್ದರು. ಮಾತ್ರವಲ್ಲ, ಶಿರಾಜುದ್ದಿನ್ ಅವರನ್ನು ಸತಾಯಿಸಿ ರು. 11 ಸಾವಿರ ಪಡೆದಿದ್ದರು. ಆದರೆ ನಕ್ಷೆಯನ್ನು ಮಾತ್ರ ಮಾಡಿಕೊಟ್ಟಿರಲಿಲ್ಲ, ಬದಲಿಗೆ ಇನ್ನೂ ಲಂಚ ಬೇಕು ಎಂದಿದ್ದರು. ಇದರಿಂದ ಬೇಸತ್ತ ಶಿರಾಜುದ್ದೀನ್ ಕೊನೆಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ದಿನೇಶ್ ಕುಮಾರ್ ಮತ್ತು ತಿಮ್ಮಯ್ಯ ತಮ್ಮ ತಂತ್ರದಂತೆ ಲಂಚದೊಂದಿಗೆ ಕೇಶವನಲ್ಲಿಗೆ ಕಳುಹಿಸಿ, ರು. 3 ಸಾವಿರ ಲಂಚ ನೀಡುತ್ತಿದ್ದಾಗ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.