ಅತ್ಯಾಚಾರ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಉಡುಪಿ: ಮಣಿಪಾಲದ ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಿಗೆ ಬುಧವಾರ ಉಡುಪಿ ಜಿಲ್ಲಾ ನ್ಯಾಯಾಲಯ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣದಲ್ಲಿ 2ನೇ ಆರೋಪಿ ಹರಿಪ್ರಸಾದ್ ಪೂಜಾರಿಗೆ ವಿಧಿಸಲಾಗಿದ್ದ 5 ದಿನಗಳ ಪೊಲೀಸ್ ಕಸ್ಟಡಿ ಬುಧವಾರ ಮುಗಿದಿದ್ದರಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆತನಿಗೆ ಜು.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಕೆ.ಎ., ಆರೋಪಿಗೆ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಪ್ರಾಣಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ಶಿವಮೊಗ್ಗ ಜೈಲಿಗೆ ಕಳುಹಿಸುವಂತೆ ಆದೇಶಿಸಿದರು.
ಈ ಪ್ರಕರಣದಲ್ಲಿ ಸಾಕ್ಷ್ಯಾಧಾರ ನಾಶಪಡಿಸಿದ ಆರೋಪದಲ್ಲಿ ಮಂಗಳವಾರ ಬಂಧಿತರಾಗಿರುವ ಹರೀಂದ್ರ ಪೂಜಾರಿ ಮತ್ತು ಬಾಲಚಂದ್ರ ಪೂಜಾರಿಗೂ ಜು.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು, ಉಡುಪಿ ಜಿಲ್ಲಾ ಕಾರಾಗೃಹದಲ್ಲಿಯೇ ಇರಿಸಲು ಆದೇಶಿಸಿದರು.
ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಉಪಅಭಿಯೋಜಕ ರಾಜು ಪೂಜಾರಿ ವಾದಿಸಿದ್ದರು. ಪ್ರಕರಣದ ತನಿಖಾಧಿಕಾರಿ ಮಣಿಪಾಲ ಠಾಣೆಯ ಉಪನಿರೀಕ್ಷಕ ಸದಾನಂದ ತಿಪ್ಪಣ್ಣನವರ್ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಯೋಗೀಶ್ ಚೇತರಿಕೆ: ಪ್ರಕರಣದ 1ನೇ ಆರೋಪಿ ಯೋಗೀಶ್ ಜೂ.27ರಂದು ಬಂಧನಕ್ಕೆ ಮೊದಲು ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ. ಆತ ಪೊಲೀಸರ ಸುಪರ್ದಿಯಲ್ಲಿದ್ದರೂ ಕಾನೂನು ಪ್ರಕ್ರಿಯೆಗಳಿಗೆ ಅನುಸಾರವಾಗಿ ಇನ್ನೂ ಬಂಧನಕ್ಕೊಳಗಾಗಿಲ್ಲ. 3ನೇ ಆರೋಪಿ ಆನಂದ ಪಾಣಾರನನ್ನೂ 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಈತನನ್ನು ಶುಕ್ರವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.