ಕಾಣಿಯೂರು ಮಠ ಪರ್ಯಾಯಕ್ಕೆ 'ಕಟ್ಟಿಗೆ ಮುಹೂರ್ತ'
ಕ.ಪ್ರ.ವಾರ್ತೆ ಉಡುಪಿ ಜು.14
ಮುಂದಿನ ವರ್ಷ ಜ.18ರಂದು ನಡೆಯುವ ಉಡುಪಿ ಶ್ರೀ ಕಾಣಿಯೂರು ಮಠದ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ಭಾನುವಾರ ಬೆಳಗ್ಗೆ 8.50ರ ಸಿಂಹ ಲಗ್ನದಲ್ಲಿ ಸಂಪನ್ನಗೊಂಡಿತು.
ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು ಪರ್ಯಾಯ ಪೂರ್ವ ಸಂಚಾರದಲ್ಲಿರುವುದರಿಂದ ಶ್ರೀಗಳ ಅನುಪಸ್ಥಿತಿಯಲ್ಲಿ ಕಟ್ಟಿಗೆ ಮುಹೂರ್ತದ ಪೂಜಾ ವಿಧಿವಿಧಾನಗಳನ್ನು ಮಠದ ದಿವಾನ ರಘುಪತಿ ಆಚಾರ್ಯ ಮತ್ತು ವ್ಯವಸ್ಥಾಪಕ ನಾಗರಾಜ ಆಚಾರ್ಯ ನೇತೃತ್ವ ಹಾಗೂ ಹೆರ್ಗ ವೇದವ್ಯಾಸ ತಂತ್ರಿ ಪೌರೋಹಿತ್ಯದಲ್ಲಿ ನಡೆದವು. ಮಠದ ದೇವರಿಗೆ ಮತ್ತು ಅನಂತೇಶ್ವರ, ಚಂದ್ರಮೌಳೀಶ್ವರ ಮತ್ತು ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಎಲ್ಲ ದೇವರ ಅನುಗ್ರಹದೊಂದಿಗೆ ಸಾಲಂಕೃತ ಆನೆ, ಬಿರುದಾವಳಿ, ಬೆಳ್ಗೊಡೆ, ಬ್ಯಾಂಡ್-ವಾದ್ಯಗಳೊಂದಿಗೆ ಮಠದ ಭಕ್ತರು ತಲೆ ಮೇಲೆ ಕಟ್ಟಿಗೆ ಹೊತ್ತು ರಥಬೀದಿಯಲ್ಲಿ ಪ್ರದಕ್ಷಿಣೆ ಬಂದು, ಮಧ್ವಸರೋವರದ ಪಾರ್ಶ್ವಕ್ಕೆ ಆಗಮಿಸಿದರು.
ಅಲ್ಲಿ ವಿಠಲ ಮೇಸ್ತ್ರಿ ಕಟ್ಟಿಗೆ ಜೋಡಿಸುವ ಮೂಲಕ ಕಟ್ಟಿಗೆ ಮುಹೂರ್ತಕ್ಕೆ ಚಾಲನೆ ನೀಡಿದರು. ಕಟ್ಟಿಗೆ ಮುಹೂರ್ತ ನೆರವೇರಿಸುವ ಪೂರ್ವದಲ್ಲಿ ನವಗ್ರಹ ಪೂಜೆಯೂ ನಡೆಯಿತು. ನಂತರ ಅಷ್ಟಮಠಗಳ ಸಹಿತ ಭಂಡಾರಕೇರಿ, ಉತ್ತರಾದಿ ಮಠಗಳ ಪ್ರತಿನಿಧಿಗಳಿಗೆ ನವಧಾನ್ಯಗಳನ್ನು ಅರ್ಪಿಸಲಾಯಿತು.
ಏನಿದು ಕಟ್ಟಿಗೆ ಮುಹೂರ್ತ?
ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಮತ್ತು ಬತ್ತ ಮುಹೂರ್ತ (ಧಾನ್ಯ ಮುಹೂರ್ತ) ಎಂಬ ನಾಲ್ಕು ಮುಹೂರ್ತಗಳನ್ನು ಆಚರಿಸಲಾಗುತ್ತದೆ. ಮುಂಬರುವ ಪರ್ಯಾಯ ಕಾಲದಲ್ಲಿ ದೇವರ ನೈವೇದ್ಯ ಮತ್ತು ಶ್ರೀಕೃಷ್ಣ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ತಯಾರಿಸಲು ಅಗಾಧ ಪ್ರಮಾಣದಲ್ಲಿ ಕಟ್ಟಿಗೆಯ ಅವಶ್ಯಕತೆ ಇರುವುದರಿಂದ ಎರಡು ವರ್ಷಗಳ ಪರ್ಯಾಯ ಕಾಲಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಿಸಿ ಒಂದು ರಥದ ಮಾದರಿಯಲ್ಲಿ ಆಕರ್ಷಕವಾಗಿ ಜೋಡಿಸಿಡುತ್ತಾರೆ. ರಥದ ನಿರ್ಮಾಣಕ್ಕೆ ಈ 'ಕಟ್ಟಿಗೆ ಮುಹೂರ್ತ' ನಾಂದಿಯಾಗುತ್ತದೆ. ಈ ಕಟ್ಟಿಗೆ ರಥದ ಮೇಲ್ಭಾಗದಲ್ಲಿ ಶಿಖರ ಸ್ಥಾಪನೆಯು ಪರ್ಯಾಯ ಪೂರ್ವಭಾವಿ ಪ್ರಕ್ರಿಯೆಗಳಲ್ಲಿ ಕೊನೆಯ ಮುಹೂರ್ತವಾದ ಬತ್ತ ಮುಹೂರ್ತದಂದು ನಡೆಯಲಿದ್ದು, ಅಂದು ಕಟ್ಟಿಗೆ ರಥ ನಿರ್ಮಾಣ ಸಂಪೂರ್ಣಗೊಳ್ಳುತ್ತದೆ.