ಮತ ಬ್ಯಾಂಕ್‌ಗೆ ಗೋವುಗಳ ಮಾರಣಹೋಮ
ಉಡುಪಿ: ಹುಲಿ, ಚಿರತೆ, ಆನೆ ಮೊದಲಾದ ಪ್ರಾಣಿಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸುವ ಸರ್ಕಾರಗಳು ಮತಬ್ಯಾಂಕ್ ರಾಜಕಾರಣಕ್ಕಾಗಿ ಗೋಸಂರಕ್ಷಣೆಯ ದಾಯಿತ್ವದಿಂದ ನುಣುಚಿಕೊಳ್ಳುತಿವೆ. ಇದರಿಂದ ದೇಶದಲ್ಲಿ ನಿತ್ಯ ನಿರಂತರ ಸಾವಿರಾರು ಗೋವುಗಳ ಮಾರಣಹೋಮ ನಡೆಯುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಿಷಾದ ವ್ಯಕ್ತಪಡಿಸಿದ್ದಾರೆ.
ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ವತಿಯಿಂದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಪೇಜಾವರ ಶ್ರೀಗಳ ಅಭಿನಂದನೆ ಮತ್ತು ನೀಲಾವರ ಗೋಶಾಲೆಗೆ ನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಮತ್ತು ನಿಧಿ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಸಮೃದ್ಧಿಯಲ್ಲಿ ಗೋವುಗಳ ಪಾತ್ರ ಅವಿನಾಭಾವವಾಗಿರುವುದರಿಂದ ಗೋರಕ್ಷಣೆ ಕಾರ್ಯದಿಂದ ದೇಶಕ್ಕೆ ಹಿತವಿದೆ. ಆದ್ದರಿಂದ ಗೋ ಸೇವೆ ಎಂದರೆ ದೇಶಕ್ಕೆ ಸಲ್ಲಿಸುವ ಸೇವೆ ಎಂದು ಶ್ರೀಗಳು ಹೇಳಿದರು. ನೀಲಾವರ ಗೋ ಶಾಲೆಯ ರೂವಾರಿ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾತನಾಡಿದರು. ಸಮಿತಿ ವತಿಯಿಂದ 3,01,111 ನಿಧಿಯನ್ನು ಶ್ರೀಗಳಿಗೆ ಸಮಿತಿ ಅಧ್ಯಕ್ಷ ನಾಗರಾಜ ಆಚಾರ್ಯ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಘುಪತಿ ಭಟ್, ಕೆ.ಎಂ. ಉಡುಪ ನೀಲಾವರ, ಕೆ. ರಂಜನ್ ಕಲ್ಕೂರ ಇತರರು ಇದ್ದರು.