ಮಠಗಳಿಗೆ ಅನುದಾನ 'ಸಾಗರಕ್ಕೆ ತರ್ಪಣ'ದಂತೆ: ಯುವ ಸೇನೆ
ಉಡುಪಿ: ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಡಿನ ನೂರಾರು ಮಠ- ಮಂದಿರಗಳಿಗೆ ಬಿಡುಗಡೆ ಮಾಡಿರುವ ಅನುದಾನದ ಪಟ್ಟಿಯನ್ನು ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವುದಕ್ಕೆ ಪ್ರತ್ರಿಕಿಯೆ ನೀಡಿರುವ ಹಿಂದೂ ಯುವಸೇನೆ, ಮಠಗಳಿಗೆ ಅನುದಾನ ನೀಡುವುದೆಂದರೆ ಸಾಗರದ ನೀರಿಗೆ ಬೋಗಸೆಯಲ್ಲಿ ತರ್ಪಣ ನೀಡಿದಂತೆ ಎಂದು ವ್ಯಾಖ್ಯಾನಿಸಿದೆ. ಈ ನಾಡಿನಲ್ಲಿ ನೂರಾರು ಮಠ ಮಂದಿರಗಳು ಸರ್ಕಾರ ಮಾಡಬೇಕಾದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸುತ್ತಿವೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ, ಸಂಸ್ಕೃತಿ ರಕ್ಷಣೆ ಮೊದಲಾದ ಮುಖಗಳಲ್ಲಿ ಮಠ ಮಂದಿರಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸರ್ಕಾರಕ್ಕೆ ಸಂದಾಯವಾಗುತ್ತಿರುವ ಆದಾಯ ಸಾಗರದಷ್ಟು. ಅದಕ್ಕೆ ಪ್ರತಿಯಾಗಿ ಸರ್ಕಾರ ಕೃತಜ್ಞತೆಯ ತರ್ಪಣವಾಗಿ ಒಂದಷ್ಟು ಅನುದಾನ ನೀಡಿದರೆ ಅದು ಅಪರಾಧವಲ್ಲ, ಸರ್ಕಾರದ ಕರ್ತವ್ಯ. ಸಾಧ್ಯವಿದ್ದರೆ ಅನುದಾನ ಪಟ್ಟಿ ಡುಗಡೆ ಮಾಡುವ ಸರ್ಕಾರ ಅವುಗಳ ಕೊಡುಗೆಯ ಪಟ್ಟಿ ಡುಗಡೆ ಮಾಡಲಿ ಎಂದು ಹಿಂದೂ ಯುವ ಸೇನೆಯ ಜಿಲ್ಲಾಧ್ಯಕ್ಷ ವಾಸುದೇವ ಭಟ್ ಒತ್ತಾಯಿಸಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಇತರ ಸರ್ಕಾರಗಳ ಅವಧಿಯಲ್ಲಿ ಹಿಂದೂಗಳ ಶ್ರದ್ಧೆಯ ಬಹುಪಾಲು ಕಾಣಿಕೆ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಗಳಿಗೆ ಹೋಗುತ್ತಿತ್ತು, ಅದರ ಪಟ್ಟಿ ಡುಗಡೆ ಮಾಡಲಿ ಎಂದು ಆಗ್ರಹಿಸಿರುವ ಭಟ್, ತಮ್ಮ ಕರ್ತವ್ಯಗಳ ಮೂಲಕ ಸರ್ಕಾರದ ಭಾರ ಕಡಿಮೆ ಮಾಡಿರುವ ಮಠಮಂದಿರಗಳು ನಾಡಿನ ಕೋಟ್ಯಂತರ ಜನರ ಪಾಲಿಗೆ ಕಲ್ಪವೃಕ್ಷ, ಕಾಮಧೇನು ಇದ್ದಂತೆ ಅವುಗಳ ರಕ್ಷಣೆ ಪೋಷಣೆ ಸರ್ಕಾರದ ಹೊಣೆ ಎಂದು ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಜಮಾಡಿ ಬಂದರು ನಿರ್ಮಾಣ ಘೋಷಣೆ; ಲಾಲಾಜಿ ಸ್ವಾಗತ
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿರುವುದನ್ನು ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಸ್ವಾಗತಿಸಿದ್ದಾರೆ. ಈ ಬಗ್ಗೆ ಈಗಾಗಲೇ ತನ್ನ ಶಾಸಕತ್ವ ಅವಧಿಯಲ್ಲಿ ಮಂಡಿಸಿರುವ ತಾಂತ್ರಿಕ ವರದಿ ಆಧಾರದಲ್ಲಿ ಶೀಘ್ರ ಟೆಂಡರು ಪ್ರಕ್ರಿಯೆ ಪ್ರಾರಂಭವಾಗಬೇಕು ಎಂದು ಆಗ್ರಹಿಸಿದ್ದಾರೆ. ಯೋಜನೆ ವಿಳಂಬ: ಈ ಹಿಂದೆ ಹಲವು ಬಾರಿ ಪೂನಾದ ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಮೂಲಕ ಸರ್ವೆ ಮಾಡಿಸಿದ್ದು, ನದಿಯಲ್ಲಿ ಬೇಸಿಗೆ ಹಾಗೂ ಮಳೆಗಾಲದ ನೀರಿನ ಸೆಳೆತ, ಹರಿಯುವಿಕೆ, ನದಿ ಮುಖದ ವಿಸ್ತರಣಾ ಜಾಗ, ಅಂದಾಜು ವೆಚ್ಚದಲ್ಲಿ ಏರಿಕೆ ಮೊತ್ತ ಇತ್ಯಾದಿ ಕಾರಣಗಳಿಂದಾಗಿ ಈ ಯೋಜನೆ ವಿಳಂಬವಾಗಿತ್ತು. ಕಳೆದ ಬಾರಿ ಅಧಿಕಾರಿಗಳು ಸಾಕಷ್ಟು ಪೂರ್ವ ತಯಾರಿಯೊಂದಿಗೆ ವರದಿ ಸಿದ್ಧಮಾಡಿಕೊಂಡಿದ್ದು, ಏಪ್ರಿಲ್, ಮೇಯಲ್ಲಿ ಚುನಾವಣಾ ಪ್ರಕ್ರಿಯೆಯಿಂದಾಗಿ ವರದಿ ಮಂಡಿಸಲಾಗಲಿಲ್ಲ. ಹೊಸ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿ ಶೀಘ್ರವೇ ಹೆಜಮಾಡಿ ಮೀನುಗಾರಿಕಾ ಬಂದರು ಕಾರ್ಯ ಪ್ರಾರಂಭಿಸಬೇಕು ಎಂದು ಮೆಂಡನ್ ಆಶಿಸಿದ್ದಾರೆ.
ರಾ.ಸಂಖ್ಯಾಶಾಸ್ತ್ರ ದಿನಾಚರಣೆ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಭಾರತೀಯ ಸಾಂಖಿಕ ಸಂಸ್ಥೆಯ ಜನಕ ಡಾ. ಪ್ರಶಾಂತಚಂದ್ರ ಮಹಾಲೋನೋಬಿಸ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಆರ್ಯ ಮಾತನಾಡಿ, ಸಂಖ್ಯಾಶಾಸ್ತ್ರದ ವ್ಯಾಪ್ತಿ ವಿಸ್ತಾರವಾದುದು, ಈ ಶಾಸ್ತ್ರದ ಮೂಲಕವೇ ಬೇರೆಬೇರೆ ಕ್ಷೇತ್ರದಲ್ಲಿ ಸಾಂಖಿಕವಾಗಿ ಸಮೀಕ್ಷೆಗಳನ್ನು ನಡೆಸಲಾಗುವುದಲ್ಲದೆ ಅಭಿವೃದ್ಧಿಯ ಮಟ್ಟ, ಏರಿಳಿತ ತಿಳಿಯಲಾಗುವುದು. ರಾಷ್ಟ್ರೀಯ ಯೋಜನೆಗಳನ್ನು ಸಿದ್ಧಪಡಿಸಲು ಸಂಖ್ಯಾಶಾಸ್ತ್ರದ ಅರಿವು ತೀರಾ ಅಗತ್ಯ ಎಂದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಮಾ ಬಾಳಿಗ ಸಂಯೋಜಿಸಿದರು. ವಿದ್ಯಾರ್ಥಿಗಳಾದ ರಿಯಾ ಹಾಗೂ ಸುಶ್ಮಿತಾ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಾಧ್ಯಾಪಕಿ ಸಹನಾ ಸ್ವಾಗತಿಸಿದರು. ವಿಭಾ ದೇವದಾಸ್ ನಿರೂಪಿಸಿದರು.